ಮಲ್ಲರಬಾಣವಾಡಿಯಲ್ಲಿ ಐಷಾರಾಮಿ ಬಂಗಲೆಗೆ ಬೆಂಕಿ

ನೆಲಮಂಗಲ: ತಾಲೂಕಿನ ಮಲ್ಲರಬಾಣವಾಡಿ ಗ್ರಾಮದ ಬಿಜೆಪಿ ಮುಖಂಡ ಹಾಗೂ ಲ್ಯಾಂಡ್ ಡೆವಲಪರ್ ರಂಗಧಾಮಯ್ಯ ಮಾಲೀಕತ್ವದ ಐಷಾರಾಮಿ ಬಂಗಲೆ ಸೋಮವಾರ ಮಧ್ಯಾಹ್ನ ಬೆಂಕಿ ಅವಘಡದಲ್ಲಿ ಸುಟ್ಟು ಭಸ್ಮವಾಗಿದೆ. ಅವಘಡದಲ್ಲಿ ರಂಗಧಾಮಯ್ಯ ಅವರ ಪತ್ನಿ ಉಮಾದೇವಿ ಮತ್ತು ಪುತ್ರಿ ನಿತ್ಯಶ್ರೀ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಗ್ನಿ ಶಾಮಕ ಸಿಬ್ಬಂದಿ ತಡ: ಮಧ್ಯಾಹ್ನ 2.30ರ ವೇಳೆ ಬೆಂಕಿಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರೂ ವಾಹನಗಳು ಸ್ಥಳಕ್ಕೆ ಬರುವುದು ತಡವಾದ ಹಿನ್ನಲೆಯಲ್ಲಿ ಬೆಂಕಿಯ ಜ್ವಾಲೆ ಇಡೀ ಮನೆ ಆವರಿಸಿತ್ತು ಎನ್ನಲಾಗಿದೆ. ಮನೆಯಿಂದ ಹೊರಬರುತ್ತಿದ್ದ ದಟ್ಟಹೊಗೆ ಗಮನಿಸಿದ ಗ್ರಾಮಸ್ಥರು ಮನೆಯ ಮುಂಭಾಗದ ಈಜುಕೊಳದಲ್ಲಿದ್ದ ನೀರಿನ ಮೂಲಕ ಬೆಂಕಿ ನಂದಿಸಲು ಹರಸಾಹಸ ನಡೆಸಿದರೂ ಪ್ರಯೋಜನವಾಗದೆ ಮನೆ ವಸ್ತುಗಳು ಸುಟ್ಟು ಭಸ್ಮವಾಗಿವೆ. ಒಂದೂವರೆ ತಾಸಿನ ಬಳಿಕ ಬೆಂಗಳೂರು ಪೀಣ್ಯ ಕೈಗಾರಿಕಾ ಪ್ರದೇಶದಿಂದ ಬಂದ ಅಗ್ನಿಶಾಮಕ ದಳ ಹಾಗೂ ನಂತರ ಆಗಮಿಸಿದ ನೆಲಮಂಗಲದ ಅಗ್ನಿಶಾಮಕದಳ ಸಿಬ್ಬಂದಿ 3 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ತಹಬದಿಗೆ ತಂದರು.

ಎಸಿ ಸಿಲಿಂಡರ್ ಸ್ಪೋಟ ಶಂಕೆ: ಮನೆಯ ನೆಲಮಹಡಿಯಲ್ಲಿನ ಸಿಲಿಂಡರ್ ಸ್ಪೋಟಗೊಂಡು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಐಷಾರಾಮಿ ಬಂಗಲೆ: ರಂಗಧಾಮಯ್ಯ ಹುಟ್ಟೂರು ಮಲ್ಲರಬಾಣವಾಡಿ. ಮೊದಲು ಪಟ್ಟಣದ ಸುಭಾಷ್​ನಗರ ಮನೆಯಲ್ಲಿದ್ದರು. 2ವರ್ಷದ ಹಿಂದೆ ಗ್ರಾಮದಲ್ಲಿ 1 ಎಕರೆ ಪ್ರದೇಶದಲ್ಲಿ ಐಷಾರಾಮಿ ಬಂಗಲೆ ಕಟ್ಟಿಸಿ ಕುಟುಂಬದೊಂದಿಗೆ ವಾಸವಿದ್ದರು.

ಕಳೆದ ಜಿಪಂ ಚುನಾವಣೆಯಲ್ಲಿ ಅರಿಶಿನಕುಂಟೆ ಜಿಲ್ಲಾಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಟಿಕೆಟ್ ಪಡೆದು ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಸದ್ಯ ಬಿಜೆಪಿಯಲ್ಲಿ ಮುಂದುವರಿದ್ದಾರೆ.