ಮಲೇರಿಯಾ ನಿಯಂತ್ರಣಕ್ಕೆ ಕ್ರಮ

ಹಾವೇರಿ: ದೇಶವನ್ನು 2025ರ ವೇಳೆಗೆ ಮಲೇರಿಯಾ ಮುಕ್ತಗೊಳಿಸುವ ಉದ್ದೇಶ ಹೊಂದಲಾಗಿದ್ದು, ‘ಶೂನ್ಯ ಮಲೇರಿಯಾ ನನ್ನಿಂದ ಆರಂಭ’ ಈ ವರ್ಷದ ವಿಶ್ವ ಮಲೇರಿಯಾ ದಿನಾಚರಣೆಯ ಘೊಷಣೆಯಾಗಿದೆ. ಜಿಲ್ಲೆಯಾದ್ಯಂತ ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ಹೇಳಿದರು.

ನಗರದ ವಾರ್ತಾ ಭವನದಲ್ಲಿ ವಿಶ್ವ ಮಲೇರಿಯಾ ದಿನದ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಲೇರಿಯಾ ರೋಗ ಇಳಿಮುಖವಾಗುತ್ತಿದೆ. 2017ರಲ್ಲಿ 70, 2018ರಲ್ಲಿ 35 ಹಾಗೂ 2019ರಲ್ಲಿ ಮಾರ್ಚ್ ಅಂತ್ಯದವರೆಗೆ ಕೇವಲ 2 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ ಎಂದರು.

ಈ ರೋಗವು ಮುಂಬರುವ ಜೂನ್, ಜುಲೈ ಹಾಗೂ ಆಗಸ್ಟ್​ನಲ್ಲಿ ಅಧಿಕವಾಗುವ ಸಂಭವವಿದೆ. ಮಲೇರಿಯಾ, ಡೆಂಘೆ, ಚಿಕೂನ್​ಗುನ್ಯಾ ರೋಗಗಳು ಉಲ್ಬಣವಾಗದಂತೆ ಇಲಾಖೆಯಿಂದ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಮನೆ ಸುತ್ತಮತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗಟಾರಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಸ್ಥಳೀಯ ನಗರ ಸಂಸ್ಥೆಗಳು ಗಮನಹರಿಸಬೇಕು. ಜಿಲ್ಲೆಯ 18 ಗ್ರಾಮಗಳಲ್ಲಿ 8,500 ಔಷಧಿಯುಕ್ತ ಸೊಳ್ಳೆ ಪರದೆ ವಿತರಿಸಲಾಗಿದೆ. ಮುಂಜಾಗ್ರತಾ ಕ್ರಮಗಳ ಕುರಿತು ಶಾಲಾ ಮಕ್ಕಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಲಾರ್ವಾ ಸರ್ವೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಸುಹಿಲ್ ಹರವಿ ಮಾತನಾಡಿ, ಮಲೇರಿಯಾ ರೋಗ ಗುಣಪಡಿಸಬಹುದು, ರೋಗದ ಲಕ್ಷಣಗಳು ಕಂಡಕೂಡಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಶಿಶುಗಳು ಮತ್ತು ಗರ್ಭಿಣಿಯರಿಗೆ ಮಲೇರಿಯಾ ರೋಗವು ಆತಂಕಕಾರಿ. ಅಂತಹವರು ಯಾವುದೇ ಜ್ವರವಿರಲಿ ತಡಮಾಡದೇ ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದರು.

ಕೀಟತಜ್ಞೆ ಇಂದಿರಾ ಪಾಟೀಲ ಮಾತನಾಡಿ, ನಿಂತ ನೀರಿನಲ್ಲಿ 24ರಿಂದ 48 ಗಂಟೆಗಳಲ್ಲಿ ಮೊಟ್ಟೆಗಳು, ಏಳು ದಿನದಲ್ಲಿ ಲಾರ್ವಾ ಹಾಗೂ 24 ತಾಸಿನಲ್ಲಿ ಸೊಳ್ಳೆಗಳು ತನ್ನ ರೂಪ ಪಡೆದುಕೊಳ್ಳುತ್ತವೆ. 32ರಿಂದ 42 ದಿನ ವಾತಾವರಣದಲ್ಲಿರುತ್ತವೆ. ಅನಾಫಿಲೀಸ್ ಸೊಳ್ಳೆ ಪ್ರಾಣಿಗಳನ್ನು ಕಚ್ಚುತ್ತದೆ. ಪ್ರಾಣಿಗಳ ಸಿಗದಿದ್ದಾಗ ಮನುಷ್ಯನ್ನು ಕಚ್ಚುತ್ತವೆ. ಗ್ರಾಮಗಳಲ್ಲಿ ದನಕರುಗಳಿಗೆ ನೀರು ಕುಡಿಸಲು ನಿರ್ವಿುಸುವ ಸಿಮೆಂಟ್ ತೊಟ್ಟಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಗ್ರಾ.ಪಂ. ಪಿಡಿಒಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯ 43 ಕೆರೆ ಹಾಗೂ 15 ಚಿಕ್ಕ ಹೊಂಡಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡಲಾಗಿದೆ ಎಂದರು.

ಟಿಎಚ್​ಒ ಡಾ. ಪ್ರಭಾಕರ ಕುಂದೂರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಜಗದೀಶ ಪಾಟೀಲ, ಶಂಕರ ಸುತಾರ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *