ಮಲೆನಾಡು ಗಿಡ್ಡ ತಳಿಗಳು ಮನೆಯಲ್ಲಿರಲಿ

ಹೊನ್ನಾವರ: ಮನೆಯಲ್ಲಿ ಶೋಕಿಗಾಗಿ ನಾಯಿ ಸಾಕುವುದಕ್ಕಿಂತ ಮಲೆನಾಡು ಗಿಡ್ಡದಂಥ ತಳಿಗಳನ್ನು ಮನೆಯಲ್ಲೇ ಬೆಳೆಸಿದರೂ ಸಾಕಷ್ಟು ಪ್ರಯೋಜನವಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ತಾಲೂಕಿನ ರ್ಕಯ ಹವ್ಯಕ ಸಭಾಭವನದಲ್ಲಿ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಭಾರತೀಯ ಗೋ ಪರಿವಾರ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಲೆನಾಡು ಗಿಡ್ಡ ಹಬ್ಬ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ‘ಇಂದಿನ ಪೀಳಿಗೆಗೆ ವೈಜ್ಞಾನಿಕ ಭಾಷೆಯಲ್ಲಿ ಹೇಳಿದರಷ್ಟೇ ಅರ್ಥವಾಗುತ್ತದೆ. ಆದ್ದರಿಂದ ದೇಶಿ ತಳಿಗಳ ಮಹತ್ವ ವಿವರಿಸುವಲ್ಲಿ ವಿಜ್ಞಾನದ ಪಾತ್ರ ಮಹತ್ವದ್ದು. ಮಲೆನಾಡು ಗಿಡ್ಡದಂಥ ಅಪೂರ್ವ ತಳಿಗಳ ಮಾಹಿತಿಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಲೆನಾಡು ಗಿಡ್ಡ ಹಬ್ಬದಂಥ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತ’ ಎಂದರು.

ಭಾರತೀಯ ಗೋ ತಳಿಗಳ ಸಂರಕ್ಷಣೆಗೆ ಇಂದು ಭಾರತದಲ್ಲಿ ಧರ್ಮಶಾಸ್ತ್ರ, ಪ್ರಾಚೀನ ಗ್ರಂಥಗಳ ಅಗತ್ಯ ಎಷ್ಟಿದೆಯೋ ವೈಜ್ಞಾನಿಕ ಪರಿಭಾಷೆಯ ಅಗತ್ಯವೂ ಅಷ್ಟೇ ಇದೆ. ಗೋವುಗಳನ್ನು ನಿಸ್ವಾರ್ಥವಾಗಿ ಸಾಕುವವರನ್ನು ಸಮಾಜ ಗುರುತಿಸಿ, ಗೌರವಿಸಬೇಕಿದೆ. ಗೋವುಗಳನ್ನು ಸಾಗಾಣಿಕೆ ಮಾಡುವಲ್ಲಿ ಇಂದು ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಪ್ರಯಾಣದ ಸುದೀರ್ಘ ಅವಧಿಯಲ್ಲಿ ಮೇವು, ನೀರು, ಗಾಯದದಂತಹ ಸಮಸ್ಯೆಯನ್ನು ನಿವಾರಿಸಲು ಗೋಸ್ವರ್ಗ ವಿಶೇಷ ವಾಹನ ಅಭಿವೃದ್ಧಿಪಡಿಸುತ್ತಿದೆ. ಗೋವುಗಳಿಗೆ ಸಾಗಾಣಿಕೆಯಲ್ಲಿ ತೊಂದರೆಯಾಗದಂತೆ ಪ್ರತ್ಯೇಕ ಕಂಪಾರ್ಟ್​ವೆುಂಟ್​ಗಳನ್ನು ನಿರ್ವಿುಸಿ, ಅದರಲ್ಲಿ ಮೇವು-ನೀರಿನ ಲಭ್ಯತೆ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

ಗೋವುಗಳು ರೈತರ ಜತೆಗೆ, ಸಮಾಜದ ಜತೆಗೆ ಇದ್ದರಷ್ಟೇ ಸಮಾಜಕ್ಕೆ ಹಿತವಾಗುತ್ತದೆ. ಯಾವುದೋ ಸಂಘ ಸಂಸ್ಥೆ, ಮಠ ಮಾನ್ಯಗಳು ಇವುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡರೂ ಅದರ ಪ್ರಯೋಜನ ಸೀಮಿತವಾಗುತ್ತದೆ ಎಂದರು.

ಗೋಸೇವೆಯಲ್ಲಿ ನಿರತರಾದ ವಿನಾಯಕ ಭಟ್ ಕಾನ್ಸೂರು, ಸುಬ್ರಾಯ ಪರಮೇಶ್ವರ ಶೆಟ್ಟಿ, ಸತೀಶ್ ಗೌಡ ಮುಲ್ಲೆಹಿತ್ಲು ಅವರನ್ನು ಸನ್ಮಾನಿಸಲಾಯಿತು. ಹೆಚ್ಚು ಹಾಲು ಕೊಡುವ ಹಸು ಸಾಕಿದವರಿಗೆ ಬಹುಮಾನ ವಿತರಿಸಲಾಯಿತು. ಮಾಜಿ ಶಾಸಕ ಡಾ.ಎಂ.ಪಿ.ರ್ಕ, ಮಂಜುನಾಥ ಭಟ್ ಸುವರ್ಣಗದ್ದೆ, ರಾಜು ಹೆಬ್ಬಾರ್, ಡಾ.ವಿಶ್ವನಾಥ್ ವಿ.ಭಟ್, ತಾಲೂಕು ಗೋ ಪರಿವಾರದ ಅಧ್ಯಕ್ಷ ಯೋಗೀಶ್ ರಾಯ್ಕರ್ ಉಪಸ್ಥಿತರಿದ್ದರು. ಎನ್​ಡಿಆರ್​ಐ ದಕ್ಷಿಣ ವಿಭಾಗ ನಿರ್ದೇಶಕ ಡಾ.ಕೆ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಗೋ ಪರಿವಾರದ ಖಜಾಂಚಿ ಮುರಳೀಧರ ಪ್ರಭು ಅವಲೋಕನ ನಡೆಸಿದರು.

ಇಂದು ಗೋಸಾಕಾಣಿಕೆಯನ್ನು ಎಷ್ಟೋ ಮಂದಿ ತ್ಯಜಿಸಿ, ಗೋವುಗಳನ್ನು ಗೋಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಇದು ಸಲ್ಲದು. ನಮ್ಮ ಅಪೂರ್ವ ತಳಿಗಳ ಮಹತ್ವ ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸಬೇಕು.
| ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ