ಮಲೆನಾಡಿನ ಜಲಮೂಲಕ್ಕೆ ಕನ್ನ ಹಾಕದಿರಿ

ಸಾಗರ: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಒಯ್ಯುವ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿ ಮಂಗಳವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಗ್ರಾಮಾಂತರ ಉಪಾಧ್ಯಕ್ಷ ಎಚ್.ಬಿ.ರಾಘವೇಂದ್ರ ಮಾತನಾಡಿ, ಮಲೆನಾಡು ಭಾಗದಲ್ಲಿ ಮಳೆ ಕೊರತೆಯಿಂದ ಗ್ರಾಮಾಂತರ ಪ್ರದೇಶಗಳ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತೆ ಆಗಿದೆ. ಸರ್ಕಾರ ಮಲೆನಾಡು ಭಾಗದ ಜನರಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗೆ ಅಗತ್ಯ ನೀರು ಪೂರೈಕೆ ಮಾಡಲು ಯೋಜನೆ ರೂಪಿಸುವುದನ್ನು ಬಿಟ್ಟು, ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಅವೈಜ್ಞಾನಿಕ ಯೋಜನೆ ರೂಪಿಸಿರುವುದು ಖಂಡನೀಯ ಎಂದರು.

ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ನೀರು ಹರಿಸುವ ಸಂಬಂಧ ಸಮಗ್ರ ಯೋಜನಾ ವರದಿ ತಯಾರು ಮಾಡಿ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಅಸಾಧ್ಯವಾದ ಯೋಜನೆಗೆ ಸಮಗ್ರ ಯೋಜನಾ ವರದಿ ತಯಾರು ಮಾಡುವ ನೆಪದಲ್ಲಿ ಮಲೆನಾಡಿನ ಜಲಮೂಲಕ್ಕೆ ಕನ್ನ ಹಾಕಬೇಡಿ ಎಂದರು.

ಪತ್ರಕರ್ತ ಸಂತೋಷಕುಮಾರ್ ಮಾತನಾಡಿ, ಈಗಾಗಲೆ ಶರಾವತಿ ಕಣಿವೆ ಪ್ರದೇಶವಾದ ಹೆನ್ನಿ, ವಡನ್​ಬೈಲ್ ಇನ್ನಿತರೆ ಕಡೆಗಳಲ್ಲಿ ಬಾವಿ ಬತ್ತಿ ಹೋಗಿದೆ. ಮಳೆ ಪ್ರಮಾಣ ಕುಸಿದಿದೆ. ಲಿಂಗನಮಕ್ಕಿ ಆಣೆಕಟ್ಟೆಯಲ್ಲಿ ಇರುವ ನೀರನ್ನು ಶರಾವತಿ ಕಣಿವೆ ಪ್ರದೇಶದ ಕೊರತೆ ಇರುವ ಭಾಗಗಳಿಗೆ ಹರಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕು. ಲಿಂಗನಮಕ್ಕಿ ಡ್ಯಾಂನಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗಲು ಕಣಿವೆ ಪ್ರದೇಶದ ಜನರ ತೀವ್ರ ವಿರೋಧವಿದೆ ಎಂದು ಹೇಳಿದರು.

ಎಸ್.ವಿ.ಹಿತಕರ ಜೈನ್ ಮಾತನಾಡಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮಧ್ಯಂತರ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ತುಮಕೂರು ಕ್ಷೇತ್ರ ವ್ಯಾಪ್ತಿ ಜನರ ಮತ ಪಡೆಯಲು ಯೋಜನೆ ರೂಪಿಸಿದಂತೆ ಕಾಣುತ್ತಿದೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರು ಮಾಡುತ್ತಿರುವುದರ ಹಿಂದೆ ನೀರು ಹರಿಸುವುದಕ್ಕಿಂತ ಯಾರದ್ದೋ ವೈಯಕ್ತಿಕ ಹಿತಾಸಕ್ತಿ ಅಡಗಿದಂತೆ ಕಾಣುತ್ತಿದೆ. ಸರ್ಕಾರ ತಕ್ಷಣ ಯೋಜನೆ ತಯಾರಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರವಿನಾಯ್ಡು, ಉಪಾಧ್ಯಕ್ಷ ಗಣಪತಿ ಶಿರಳಗಿ, ಎಂ.ಜಿ.ರಾಘವನ್, ಎ.ಡಿ.ರಾಮಚಂದ್ರ, ಎ.ಡಿ.ಸುಬ್ರಹ್ಮಣ್ಯ, ಎಂ.ರಾಘವೇಂದ್ರ, ಮೃತ್ಯುಂಜಯ ಚಿಲುಮೆಮಠ, ಕೆ.ಎನ್.ವೆಂಕಟಗಿರಿ, ಲೋಕೇಶಕುಮಾರ್, ಗಿರೀಶ್ ರಾಯ್ಕರ್, ರಮೇಶ್ ಗುಂಡೂಮನೆ, ರಾಜೇಶ್ ಬಡ್ತಿ, ಮಹೇಶ್ ಹೆಗಡೆ, ರಾಘವೇಂದ್ರ ಶರ್ವ, ಆರ್.ಜಗನ್ನಾಥ್, ಬಿ.ಡಿ.ರವಿಕುಮಾರ್, ಮಲ್ಲಿಕಾರ್ಜುನ್, ಚಂದ್ರಶೇಖರ್, ವಸಂತ, ಉಮೇಶ್, ಇಮ್ರಾನ್, ನಾಗರಾಜ್, ಯೋಗೀಶ್ ಭಟ್ ಇತರರು ಹಾಜರಿದ್ದರು.

ಸರ್ಕಾರ ಪರ್ಯಾಯ ಮಾರ್ಗ ಚಿಂತಿಸಲಿ: ಕಳೆದ ನಾಲ್ಕೈದು ವರ್ಷಗಳಿಂದ ಲಿಂಗನಮಕ್ಕಿ ಡ್ಯಾಂಗೆ ಹರಿದು ಬರುವ ಪ್ರದೇಶದಲ್ಲಿ ಮಳೆ ಪ್ರಮಾಣ ತೀರ ಕುಸಿದಿದೆ. ಶೇ. 40ರಷ್ಟು ಹೂಳು ತುಂಬಿದ್ದರಿಂದ ಡ್ಯಾಂನ ನೀರಿನ ಸಾಮರ್ಥ್ಯ ಸಹ ಕುಸಿದಿದೆ. ಇರುವ ನೀರು ವಿದ್ಯುತ್ ಉತ್ಪಾದನೆಗೆ ಸಾಕಾಗುವುದಿಲ್ಲವೇನೋ ಎನ್ನುವ ದುಸ್ಥಿತಿ ಇರುವಾಗ ರಾಜ್ಯ ಸರ್ಕಾರ ಇಲ್ಲದ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಅವೈಜ್ಞಾನಿಕ ಯೋಜನೆಗೆ ಡಿಪಿಆರ್ ತಯಾರಿಸಲು ಹೇಳಿರುವುದು ಹಾಸ್ಯಾಸ್ಪದ ಸಂಗತಿ ಎಂದು ಸಂಘದ ಅಧ್ಯಕ್ಷ ಜಿ.ನಾಗೇಶ್ ತಿಳಿಸಿದರು. ಸರ್ಕಾರ ಬೆಂಗಳೂರಿಗೆ ನೀರು ಒದಗಿಸಲು ಪರ್ಯಾಯ ಮಾರ್ಗ ಯೋಚಿಸಬೇಕು. ಶರಾವತಿ ನದಿ ನೀರು ಒಯ್ಯುವ ಆಲೋಚನೆಯಿಂದ ಹೊರಗೆ ಬರಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *