ಮಲೆನಾಡಿನ ಗುಜ್ಜೆ ಹಲಸಿಗಿದೆ ವಿದೇಶಿ ರಫ್ತಿನ ಅವಕಾಶ

ಶಿರಸಿ: ನಮ್ಮ ಆಹಾರ ಸಂಸ್ಕೃತಿ ಉಳಿದೆಲ್ಲರಿಗಿಂತ ಭಿನ್ನವಾಗಿದೆ. ತಲೆಮಾರಿನಿಂದ ತಲೆಮಾರಿಗೆ ದಾಟುವಾಗ ಕೊಂಡಿ ಕಳಚಿದರೆ ಪುನಃ ನಮ್ಮತನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಅರಣ್ಯ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಆರ್. ವಾಸುದೇವ ಹೇಳಿದರು.

ನಗರದ ಲಿಂಗದಕೋಣ ಕಲ್ಯಾಣಮಂಟಪದಲ್ಲಿ ವನಸ್ತ್ರೀ ಸಂಘಟನೆ ಸೋಮವಾರ ಆಯೋಜಿಸಿದ್ದ ಮಲೆನಾಡು ಮೇಳದಲ್ಲಿ ಔಷಧ ಗಿಡವನ್ನು ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮಲ್ಲಿಯ ಅಡವಿ ಆಹಾರ ಪದ್ಧತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಉತ್ತಮ ಅವಕಾಶವಿದೆ. ಯುರೋಪ್ ಮತ್ತು ಜರ್ಮನಿಯಲ್ಲಿ ಮಾಂಸಾಹಾರದ ಬದಲು ಹಲಸನ್ನು ಬಳಸಲಾ ರಂಭಿಸಿದ್ದಾರೆ. ಮಲೆನಾಡಿನ ಗುಜ್ಜೆ ಹಲಸನ್ನು ವಿದೇಶಕ್ಕೆ ರಫ್ತು ಮಾಡಲು ಅವಕಾಶವಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ಮಾಂಸಾಹಾರಕ್ಕೆ ಮಾತ್ರ ಸೀಮಿತಗೊಳ್ಳುತ್ತಿವೆ. ಭಾರತದಲ್ಲಿಯೂ ಮನೆ ಅಡುಗೆಗಿಂತ ಹೋಟೆಲ್, ಬೇಕರಿಗಳತ್ತ ಜಾಸ್ತಿ ಆಕರ್ಷಿತರಾಗಿ ಆಹಾರದ ಸ್ವರೂಪವೇ ಬದಲಾಗುತ್ತಿದೆ. ಕೊಬ್ಬಿನ ಆಹಾರ ಅಧಿಕವಾಗಿ ಬಳಸಿದ ಕಾರಣ ಮಧುಮೇಹಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ’ ಎಂದು ಹೇಳಿದರು.

ಬರಹಗಾರ ಶಿವಾನಂದ ಕಳವೆ, ಡಿಎಫ್​ಒ ಎಸ್. ಜಿ. ಹೆಗಡೆ, ವನಸ್ತ್ರೀ ಟ್ರಸ್ಟಿಗಳಾದ ಸುನಿತಾ ರಾವ್, ಶೈಲಜಾ ಗೋರ್ನಮನೆ ಇತರರಿದ್ದರು.

ಸೋಲಿಗರೂ ಭಾಗಿ

ಮಲೆನಾಡು ಮೇಳದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಳಿಗಿರಿ ರಂಗನ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿರುವ ಸೋಲಿಗರು ಆಗಮಿಸಿದ್ದರು. ಪುಟ್ಟೇಗೌಡ, ನಂಜೇಗೌಡ, ಜಡೆಗೌಡ ಇತರರು ತಮ್ಮ ಪ್ರದೇಶದಲ್ಲಿ ಖಾದ್ಯಕ್ಕೆ ಬಳಸುವ ಸೊಪ್ಪುಗಳ ಬಗ್ಗೆ ವಿವರಿಸಿದರು. 50ಕ್ಕೂ ಅಧಿಕ ಸೊಪ್ಪುಗಳು, ವಿವಿಧ ಸಸ್ಯಗಳ ಸೊಪ್ಪು, ಅಡುಗೆ ವಿಧಾನದ ಬಗ್ಗೆ ವಿವರಿಸಿದರು.

ಆಕರ್ಷಿಸಿದ ಅಡವಿ ಆಹಾರ ಸ್ಪರ್ಧೆ

ಮಹಿಳೆಯರಿಗಾಗಿ ಅಡವಿ ಆಹಾರ ಅಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು. 50ಕ್ಕೂ ಅಧಿಕ ಮಹಿಳೆಯರು ಕಾಡಿನ ಬೇರು, ಗಡ್ಡೆ, ಅಣಬೆ, ಜೇನು ಇನ್ನಿತರ ವಸ್ತುಗಳನ್ನು ಬಳಸಿಕೊಂಡು ಹಲವು ವಿಧದ ತಿಂಡಿಗಳನ್ನು ಸಿದ್ಧಪಡಿಸಿ ಸ್ಪರ್ಧೆಗೆ ತಂದಿದ್ದರು.

ಮೂವತ್ತಕ್ಕೂ ಅಧಿಕ ಸ್ಟಾಲ್​ಗಳು

ವನಸ್ತ್ರೀ ಸಂಘಟನೆಯ ಸದಸ್ಯೆಯರಿಂದ 30ಕ್ಕೂ ಅಧಿಕ ಸ್ಟಾಲ್​ಗಳನ್ನು ತೆರೆಯಲಾಗಿತ್ತು. ತಮ್ಮ ಮನೆಗಳಲ್ಲಿ, ಸಂಘಗಳಲ್ಲಿ ಬೆಳೆಯಲಾದ ಅಪರೂಪದ ಹೂವಿನ ಗಿಡಗಳು, ಡೇರೆ, ಲಿಲ್ಲಿ ಇನ್ನಿತರ ಗಿಡಗಳ ಗಡ್ಡೆಗಳನ್ನು ಮಹಿಳೆಯರು ಮಾರಾಟಕ್ಕೆ ತಂದಿದ್ದರು. ಇದರ ಜತೆಯಲ್ಲಿ ಮನೆಯಲ್ಲಿಯೇ ಸಿದ್ಧಪಡಿಸಲಾದ ಹಪ್ಪಳ, ಸಂಡಿಗೆ ಹಾಗೂ ಇನ್ನಿತರ ಸಂಗ್ರಹಿಸಿ ಇಡಬಲ್ಲ ತಿಂಡಿಗಳ ಮಾರಾಟವೂ ನಡೆಯಿತು.

Leave a Reply

Your email address will not be published. Required fields are marked *