ಮಲೆನಾಡಿನಲ್ಲಿ ಬಿರುಸುಗೊಂಡ ಮಳೆ, ರಸ್ತೆಗೆ ಉರುಳಿದ ಮರಗಳು

ಬಾಳೆಹೊನ್ನೂರು: ಮಲೆನಾಡಿನಾದ್ಯಂತ ಬುಧವಾರ ವರ್ಷಧಾರೆ ಬಿರುಸುಗೊಂಡಿತು. ಚಿಕ್ಕಮಗಳೂರಿನಲ್ಲಿ ಸಾಧಾರಣವಾಗಿ ಮಳೆಯಾಗಿದೆ. ಆಲ್ದೂರು- ಬಾಳೆಹೊನ್ನೂರು ಸಂರ್ಪಸುವ ಚಿಕ್ಕಮಗಳೂರು ರಸ್ತೆಯ ಕಣತಿ ಸಮೀಪದ ಅರೇನೂರು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಭಾರಿ ಗಾಳಿಗೆ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಎರಡು ತಾಸು ಸಂಚಾರ ವ್ಯವಸ್ಥೆಗೆ ಅಡಚಣೆಯಾಗಿತ್ತು.

ಎರಡು ದಿನಗಳಿಂದ ಮಲೆನಾಡು ಭಾಗದಲ್ಲಿ ತೀವ್ರ ಗಾಳಿ ಬೀಸುತ್ತಿದ್ದು, ಸಾಧಾರಣ ಮಳೆಯಾಗುತ್ತಿದೆ. ಬುಧವಾರ ಬೆಳಗ್ಗೆ 8.30ಕ್ಕೆ ಅರೇನೂರು ಗ್ರಾಮದಲ್ಲಿ ಮರ ಬಿದ್ದಿತ್ತು. ಇದರಿಂದ ಚಿಕ್ಕಮಗಳೂರು ಮತ್ತು ಬಾಳೆಹೊನ್ನೂರು ಕಡೆಗೆ ತೆರಳುವ ಎರಡೂ ಕಡೆಗಳಲ್ಲೂ ಬಹುದೂರದವರೆಗೆ ವಾಹನಗಳು ನಿಂತಿದ್ದವು. ಸ್ಥಳೀಯರು ಧಾವಿಸಿ ಯಂತ್ರದ ಮೂಲಕ ಮರ ಕತ್ತರಿಸಿ ತೆರವುಗೊಳಿಸಿ 10.30ರ ವೇಳೆಗೆ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟರು.

ಮರ ಬಿದ್ದ ವಿಷಯ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ, ಮೆಸ್ಕಾಂ, ಆಲ್ದೂರು ಠಾಣೆಗೆ ಕರೆ ಮಾಡಿ ತಿಳಿಸಿದರೂ ಸ್ಥಳಕ್ಕೆ ಯಾರೂ ಬರಲಿಲ್ಲ. ಮರ ಕತ್ತರಿಸಿ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟವರಿಗೆ ವಾಹನಗಳ ಚಾಲಕರು ತಲಾ 50 ರೂ. ನೀಡಿದರು.

ಟ್ರಾಫಿಕ್ ನಲ್ಲಿ ಸಿಲುಕಿದ ಸಂಸದ ತೇಜಸ್ವಿ ಸೂರ್ಯ: ಅರೇನೂರು ಬಳಿ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾದಾಗ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೂಡ ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡಿದರು. ಬೆಳಗ್ಗೆ ತೇಜಸ್ವಿ ಸೂರ್ಯ ಅವರು ಚಿಕ್ಕಮಗಳೂರು ಮೂಲಕ ಆಲ್ದೂರು ಮಾರ್ಗವಾಗಿ ಶೃಂಗೇರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮರಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ತೇಜಸ್ವಿ ಸೂರ್ಯ ಅವರು ಕಾರಿನಿಂದ ಇಳಿದು ಸ್ಥಳೀಯರು ಮರ ತೆರವುಗೊಳಿಸುತ್ತಿದ್ದುದನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿದರು. ಆದರೆ ಸ್ಥಳದಲ್ಲಿದ್ದ ಹಲವರಿಗೆ ಇವರು ಸಂಸದ ತೇಜಸ್ವಿ ಸೂರ್ಯ ಎಂದು ಗೊತ್ತಾಗಲೇ ಇಲ್ಲ. ಮರ ತೆರವುಗೊಳಿಸುವವರೆಗೆ ಸಮಾಧಾನದಿಂದ ಕಾದು ಬಳಿಕ ಶೃಂಗೇರಿಗೆ ತೆರಳಿದರು.