ಮಲೆನಾಡಿಗೆ ಮೊದಲ ಮಳೆಯ ಸಿಂಚನ

ಶಿವಮೊಗ್ಗ: ಬಿಸಿಲಿನ ಬೇಗೆಗೆ ಬಂದಿದ್ದ ಮಲೆನಾಡು ಶಿವಮೊಗ್ಗಕ್ಕೆ ಶುಕ್ರವಾರ ಮೊದಲ ಮಳೆ ಸಿಂಚನವಾಯಿತು. ಕಳೆದೆರಡು ತಿಂಗಳಿಂದ ಬಿಸಿಲಿನ ತಾಪಕ್ಕೆ ನಲುಗಿದ್ದ ಜನತೆಗೆ ಸಂಜೆ ಸುರಿದ ವರ್ಷಧಾರೆ ತಂಪೆರೆಯಿತು.

ಭಾರಿ ಸಿಡಿಲು ಮತ್ತು ಗುಡುಗಿನ ಆರ್ಭಟದ ನಡುವೆ ನಗರ ಭಾಗ ಸೇರಿ ಜಿಲ್ಲೆಯ ಹಲವೆಡೆ ಮಳೆ ಸುರಿಯಿತು. ತಾಲೂಕಿನ ಆಯನೂರು, ಕುಂಸಿ, ಬಾಳೆಕೊಪ್ಪ, ಅಬ್ಬಲಗೆರೆ, ಜನ್ನಾಪುರ, ನವುಲೆ ಸೇರಿ ತಾಲೂಕಿನ ಹಲವಡೆ ಗುಡುಗು ಸಹಿತ ಮಳೆಯಾಗಿದ್ದು, ಶಿವಮೊಗ್ಗ ನಗರದಲ್ಲೂ ವರುಣನ ಆಗಮನ ಜನತೆಗೆ ಖುಷಿ ನೀಡಿದೆ. ಭದ್ರಾವತಿಯಲ್ಲೂ ಉತ್ತಮ ಮಳೆಯಾಯಿತು. ಅನಿರೀಕ್ಷಿತ ಮಳೆಯಿಂದ ಕೆಲ ನಿಮಿಷ ಸಾರ್ವಜನಿಕರು ಮತ್ತು ಬೈಕ್ ಸವಾರರು ಬಸ್ ನಿಲ್ದಾಣ, ಹೋಟೆಲ್, ಮಳಿಗೆಗಳು ಸೇರಿ ಇನ್ನಿತರೆಡೆ ಆಶ್ರಯ ಪಡೆದು ಪರದಾಡುವಂತಾಯಿತು. ಇನ್ನುಳಿದಂತೆ ಶಿಕಾರಿಪುರ, ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲೂ ಮೋಡ ಕವಿತ ವಾತಾವರಣವಿದ್ದು, ಗುಡುಗು ಮತ್ತು ಸಿಡಿಲಿನ ಆರ್ಭಟ ಜೋರಾಗಿತ್ತು.