Karwar,Tenth, Class, Learning, Bed,ಮಲಗಿದಲ್ಲೇ, ಹತ್ತನೇ, ತರಗತಿ,ಕಲಿಕೆ,

ಮಲಗಿದಲ್ಲೇ ಹತ್ತನೇ ತರಗತಿಯ ಕಲಿಕೆ

ಕಾರವಾರ: ಆತ ಪ್ರತಿಭಾವಂತ ವಿದ್ಯಾರ್ಥಿ, ಓದಿನಲ್ಲಿರಲಿ, ಇತರ ಪಠ್ಯೇತರ ಚಟುವಟಿಕೆಯಲ್ಲಿರಲಿ ಸದಾ ಮುಂದಿದ್ದ. ಕಳೆದ ಏಪ್ರಿಲ್​ನಲ್ಲಿ ನಡೆದ ಅಪಘಾತವೊಂದು ಆತನ ಬದುಕನ್ನು ಕಸಿದುಕೊಂಡಿದೆ.

ಅಂದು ಏಪ್ರಿಲ್ 9, ತಾನು ಬರೆದ ಒಂಬತ್ತನೇ ತರಗತಿಯ ಫಲಿತಾಂಶ ಬರುವ ಖುಷಿಯಲ್ಲಿ ಓಡಾಡಿಕೊಂಡಿದ್ದ ಕಾರವಾರ ಹಳಗಾದ ನಿವಾಸಿ ಉಳಗಾ ಮಹಾಸತಿ ಹೈಸ್ಕೂಲ್ ವಿದ್ಯಾರ್ಥಿ ಬ್ರಿಯಾನ್ ಟೆಲ್ಲೀಸ್​ಗೆ ಆಘಾತ ಕಾದಿತ್ತು.

ತಂದೆ ಜತೆಗೆ ಬೈಕ್​ನ ಹಿಂದೆ ಕುಳಿತು ತೆರಳುವ ಸಂದರ್ಭದಲ್ಲಿ ಕಾರು ಡಿಕ್ಕಿಯಾಗಿ ಆತನ ಎಡಗಾಲಿನ ಪಾದ ಛಿದ್ರವಾಗಿತ್ತು. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಮಂಗಳೂರಿನ ಆಸ್ಪತ್ರೆಯಲ್ಲಿ ಆತನ ಪಾದವನ್ನು ತುಂಡು ಮಾಡಲಾಗಿದೆ.

ಮನೆಯಲ್ಲೇ ಪಾಠ: ಒಂಬತ್ತನೇ ತರಗತಿಯಲ್ಲಿ ಶೇ. 80ಕ್ಕೂ ಅಧಿಕ ಅಂಕ ಗಳಿಸಿ, 10ನೇ ತಗತಿಗೆ ತೆರಳಬೇಕು ಎಂದಿದ್ದ ಬಾಲಕ ಈಗ ಮನೆಯ ಹಾಸಿಗೆಯಲ್ಲೇ ಮಲಗುವಂತಾಗಿದೆ. ಪಕ್ಕದ ಮನೆಯಲ್ಲಿರುವ ಶಿಕ್ಷಕ ರಾಮಕೃಷ್ಣ ನಾಯ್ಕ ಗಣಿತ ಮತ್ತು ವಿಜ್ಞಾನವನ್ನು ಮನೆಗೇ ಬಂದು ಪಾಠ ಮಾಡುತ್ತಿದ್ದಾರೆ. ನಾನು ಓದಬೇಕು ಎಂಬುದು ಬಾಲಕನ ಹಂಬಲ.

ಮನೆಯಲ್ಲಿ ದುಸ್ಥಿತಿ
ಬಾಲಕನ ತಂದೆ ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ತಾಯಿ ಸಮೀಪದ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಜಾಗದ ಕೊರತೆಯಿಂದ ಶೌಚಗೃಹ ಕೂಡ ಇಲ್ಲ. ಬಾಲಕನ ಚಿಕಿತ್ಸೆಗೆ ಇದುವರೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಕುಟುಂಬ ಸೋತು ಹೋಗಿದೆ. ಈಗಾಗಲೇ ಸಂಬಂಧಿಕರು, ಸಮೀಪದ ವಿವಿಧ ಸಂಘಟನೆಗಳಿಂದ ಸಹಕಾರ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಕೃತಕ ಕಾಲು ಜೋಡಿಸಿದಲ್ಲಿ ಬಾಲಕ ಮೊದಲಿನಂತೆ ಓಡಾಡಬಹುದಾಗಿದೆ. ಕುಟುಂಬಕ್ಕೆ ಬೇರೆ ಆದಾಯದ ಮೂಲವಿಲ್ಲ. ಇದರಿಂದ ಬಾಲಕನಿಗೆ ಸಹೃದಯರು ನೆರವಾಗಬೇಕು ಎಂದು ತಾಯಿ ಪ್ರೀತಿ (9481914971) ಟೆಲ್ಲೀಸ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *