ಮರ ಕತ್ತರಿಸಿದಕ್ಕೆ ಪರಿಸರವಾದಿಗಳ ಆಕ್ರೋಶ

ಧಾರವಾಡ: ಮಳೆಗಾಲ ಸಂದರ್ಭದಲ್ಲಿ ಜನರಿಗೆ ಸಮಸ್ಯೆ ಉಂಟು ಮಾಡುವ ಮರಗಳನ್ನು ಕಡಿಯಲು ಮುಂದಾಗಿರುವ ಅರಣ್ಯ ಇಲಾಖೆ ಕಾರ್ಯ ಇದೀಗ ಪರಿಸರವಾದಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ನಗರದ ಸಪ್ತಾಪುರ, ಹೊಸಯಲ್ಲಾಪುರ, ಕೆಲಗೇರಿ, ನಾರಾಯಣಪುರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಅಪಾಯಕಾರಿ ಆಗಿರುವ ಒಟ್ಟು 160 ಮರಗಳ ಪಟ್ಟಿಯನ್ನು ಅರಣ್ಯ ಇಲಾಖೆ ಸಿದ್ಧಪಡಿಸಿದೆ. ಈ ಪೈಕಿ ಕೆಲ ಕಡೆಗಳಲ್ಲಿ ಮರಗಳು ಹಾಗೂ ಕೆಲವೆಡೆ ಮರಗಳ ರೆಂಬೆ, ಕೊಂಬೆ ಕತ್ತರಿಸುವಂತೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಗುತ್ತಿಗೆ ಪಡೆದವರು ಮರ ಕತ್ತರಿಸುವ ಕೆಲಸ ಪ್ರಾರಂಭಿಸಿದ್ದಾರೆ.

ಆದರೆ, ಇಲ್ಲಿನ ಸಪ್ತಾಪುರ ಬಳಿ ಯಾವುದೇ ಅಪಾಯ ಮಾಡದ ಹಾಗೂ ಹಳೇ ಮರವನ್ನು ಧರೆಗುರುಳಿಸಿದ್ದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜನರಿಗೆ ನಿಜವಾಗಿ ಅಪಾಯಕಾರಿಯಾಗಿರುವ ಮರವನ್ನು ಮಾತ್ರ ಕತ್ತರಿಸಲಿ. ಅದನ್ನು ಬಿಟ್ಟು ಜನರು ದೂರು ನೀಡಿದ್ದಾರೆ ಎಂದು ಮರಗಳನ್ನು ಧರೆಗುರುಳಿಸುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಬಾರಿಯಂತೂ ನಗರದಲ್ಲಿ ಬಿಸಿಲಿನ ತಾಪ 40 ಡಿಗ್ರಿಗೆ ತಲುಪುವಂತಾಗಿದೆ. ಈ ಸಂದರ್ಭದಲ್ಲಿ ಇದ್ದ ಕೆಲ ಮರಗಳನ್ನೂ ಕಡಿದರೆ ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಇನ್ನೂ ಹೆಚ್ಚಲಿದೆ. ಹೀಗಾಗಿ ಇದ್ದ ಮರಗಳನ್ನಾದರೂ ಉಳಿಸಬೇಕು ಎಂಬುದು ಪರಿಸರವಾದಿಗಳ ಆಗ್ರಹ.

ಈ ಕುರಿತು ನೇಚರ್ ಫಸ್ಟ್ ಇಕೋ ವಿಲೇಜ್ ಅಧ್ಯಕ್ಷ ಪಿ.ವಿ. ಹಿರೇಮಠ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಜನರು ದೂರು ನೀಡಿದ್ದಾರೆ ಎಂಬ ಮಾತ್ರಕ್ಕೆ ಬುಡ ಸಮೇತ ಮರಗಳನ್ನು ಕಡಿಯುವುದು ತಪ್ಪು. ಇಡೀ ಮರ ಕಡಿಯುವ ಬದಲು ಮರಗಳಿಂದ ಜನರಿಗೆ ಸಮಸ್ಯೆ ಆಗದಂತೆ ರೆಂಬೆ, ಕೊಂಬೆಗಳನ್ನು ಸರಿಯಾಗಿ ಕಟ್ ಮಾಡಲು ಚಿಂತಿಸಬೇಕು ಎಂದು ಮನವಿ ಮಾಡಿದ್ದಾರೆ.

ಜನರು ತಮ್ಮ ಆಸ್ತಿಗಳಿಗೆ ಹಾನಿ ಮಾಡುವ ಮರಗಳನ್ನು ಕಡಿಯುವಂತೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅನುಮತಿ ನೀಡಿದ ಮರಗಳನ್ನು ಕಡಿದಿದ್ದಾರೆ. ಈ ಕುರಿತು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ ಕಾರಣ ಸದ್ಯ ಮರ ಕತ್ತರಿಸುವ ಇಂದಿನ ಕೆಲಸ ಬಂದ್ ಮಾಡಲಾಗಿದೆ. ಮರಗಳನ್ನು ಕತ್ತರಿಸದೇ ಜನರ ಸಮಸ್ಯೆ ಪರಿಹರಿಸಲು ಸಾಧ್ಯವೇ ಎಂಬ ಕುರಿತು ವಿಚಾರ ನಡೆದಿದೆ. ಸಂಬಂಧಿಸಿದವರೊಂದಿಗೆ ರ್ಚಚಿಸಿ ಮುಂದಿನ ಕೆಲಸ ನಡೆಸಲಾಗುವುದು.

ವಿಜಯಕುಮಾರ, ಆರ್​ಎಫ್​ಒ

Leave a Reply

Your email address will not be published. Required fields are marked *