More

  ಮರೆಯಾಗುತ್ತಿರುವ ಸೇವಾ ಮನೋಭಾವ

  ನಂಜನಗೂಡು: ಯೋಗ, ಧ್ಯಾನ ಹಾಗೂ ಅಧ್ಯಾತ್ಮದಿಂದ ಸಂಸ್ಕಾರಯುತ ಸಮಾಜ ಕಟ್ಟುವ ಮೂಲಕ ನಂಜನಗೂಡು ನಗರವನ್ನು ಯೋಗನಗರಿಯನ್ನಾಗಿ ಮಾಡುವ ಸಂಕಲ್ಪ ಮಾಡಬೇಕಿದೆ ಎಂದು ಉದ್ಯಮಿ ಉಮೇಶ್ ಶರ್ಮ ಹೇಳಿದರು.

  ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಯೋಗ ಮಹಾಮನೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನಂಜನಗೂಡು ಶಾಖೆಯ 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

  ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದಾರ್ಥಗಳ ಕಲಬೆರಕೆಯಿಂದಾಗಿ ಆರೋಗ್ಯ ಕಾಪಾಡಿಕೊಳ್ಳುವುದೇ ದುಸ್ತರವಾಗಿದೆ. ಇಂದಿನ ಪೀಳಿಗೆಯಲ್ಲಿ ಸಂಸ್ಕಾರ, ಸೇವಾ ಮನೋಭಾವ ಮರೆಯಾಗುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಸಮಾಜ ಸಾಗುತ್ತಿರುವ ರೀತಿ ನೋಡಿದರೆ ಭಯ ಹುಟ್ಟಿಸುತ್ತದೆ. ಜನಸಮುದಾಯವನ್ನು ಸುಸ್ಥಿರ ಬದುಕಿನತ್ತ ಮರಳಿ ತರಬೇಕಾದ ಜರೂರಿದೆ ಎಂದರು.

  ಈ ನಿಟ್ಟಿನಲ್ಲಿ ಕಳೆದ 11 ವರ್ಷಗಳಿಂದ ನಿರಂತರವಾಗಿ ಉಚಿತ ಯೋಗ, ಧ್ಯಾನ, ಅಧ್ಯಾತ್ಮದ ಮೂಲಕ ಸಂಸ್ಕಾರಯುತ ಸಮಾಜ ಕಟ್ಟುವ ಕಾಯಕದಲ್ಲಿ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸೇವಾ ಕಾರ್ಯ ಮಾದರಿಯಾಗಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಂಘಟನೆ ಮಾಡುವುದು ಕಷ್ಟಸಾಧ್ಯ. ಆದರೂ ಆ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಮಿತಿಯ ನಂಜನಗೂಡನ್ನು ಯೋಗನಗರಿಯನ್ನಾಗಿ ಮಾಡುವ ಆಶಯಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲೋಣ ಎಂದು ಹೇಳಿದರು.

  ಕಾರ್ಯಕ್ರಮದಲ್ಲಿ ವಿವಿಧ 10 ಶಾಲೆಗಳಿಂದ 50 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
  ಹಿರಿಯ ಪತ್ರಕರ್ತ ಎಂ.ಎನ್. ಮೋಹನ್‌ಕುಮಾರ್ ಮಾತನಾಡಿದರು. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ. ರೇವಣ್ಣ, ಕಾರ್ಯದರ್ಶಿ ಗಣೇಶ್‌ಮೂರ್ತಿ, ಮಹಾಗುರು ಪ್ರಕಾಶ್, ಉದ್ಯಮಿ ಸುಕುಮಾರ್ ಉಪಸ್ಥಿತರಿದ್ದರು.

  ಯೋಗ ಪ್ರದರ್ಶನ:
  ಸಮಿತಿಯ ಯೋಗಬಂಧುಗಳು ನಡೆಸಿಕೊಟ್ಟ ಕಲಾತ್ಮಕ ಯೋಗ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು. ಸಾಮೂಹಿಕವಾಗಿ ನಾನಾ ಯೋಗ ಕಲಾ ಪ್ರಕಾರವನ್ನು ಪ್ರಸ್ತುತಪಡಿಸಿದರು. ಸಮಿತಿ ವ್ಯಾಪ್ತಿಗೆ ಬರುವ ಮಹಾಮನೆ, ಸುಶ್ರುತ, ಕಪಿಲಾ, ಕಾವೇರಿ, ಅಕ್ಕಮಹಾದೇವಿ, ಸರಸ್ವತಿ ಹಾಗೂ ಯಮುನ ಶಾಖೆಯ ಯೋಗಬಂಧುಗಳು ಯೋಗದ ನಾನಾ ಭಂಗಿಗಳನ್ನು ಪ್ರದರ್ಶಿಸಿದರು. ಭಾವಗೀತೆ, ಭಕ್ತಿಗೀತೆಗಳ ಗಾಯನದ ಮೂಲಕವೂ ಎಲ್ಲರ ಕರತಾಡನ ಗಿಟ್ಟಿಸಿಕೊಂಡರು.

  ಕಾರ್ಯಕ್ರಮದಲ್ಲಿ ಮಾತೃಭೋಜನ ವೈಶಿಷ್ಟೃತೆಯಿಂದ ಕೂಡಿತ್ತು. ಭಾಗವಹಿಸಿದ್ದ ನೂರಾರು ಯೋಗಾಸಕ್ತರಿಗೆ 25ಕ್ಕೂ ಹೆಚ್ಚು ಮಹಿಳೆಯರು ಬಗೆಬಗೆಯ ತಿನಿಸುಗಳನ್ನು ಕೈತುತ್ತಿನ ಮೂಲಕ ಉಣಬಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts