ಸಿನಿಮಾ

ಮರುಬಳಕೆ ತ್ಯಾಜ್ಯ ಸಾಮಗ್ರಿ ನೀಡಲು ಆಹ್ವಾನ

ಹಾಸನ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ -2.0 ಯೋಜನೆಯಡಿ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಪರಿಣಾಮ ಬೀರುವ ಅಭಿಯಾನವನ್ನು ಪ್ರಾರಂಭಿಸಿದೆ. ಕಾರ್ಯಕ್ರಮದ ಉದ್ದೇಶ ನಗರಸಭೆಗೆ ತ್ಯಾಜ್ಯ ನಿರ್ವಹಣೆ ಹೊರೆ ತಗ್ಗಿಸಿ, ತ್ಯಾಜ್ಯ ಉತ್ಪತ್ತಿಯ ಪ್ರಮಾಣ ಕಡಿಮೆ ಮಾಡಲು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂಬಂಧ ನನ್ನ ಜೀವನ ನನ್ನ ಸ್ವಚ್ಛ ನಗರಿ ಕಾರ್ಯಕ್ರಮ ಆಯೋಜಿಸಿದೆ. ಹಾಸನ ನಗರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಕಡಿಮೆಗೊಳಿಸುವುದು, ಮರುಬಳಕೆ ಮತ್ತು ಪುನರ್ ಬಳಕೆಗಾಗಿ ಕೇಂದ್ರಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ತೆರೆಯಲಾಗಿದೆ ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವಿಜಯನಗರ, ಬೇಲೂರು ರಸ್ತೆ, ನಗರಸಭಾ ನೀರಿನ ಟ್ಯಾಂಕ್ ಹತ್ತಿರ, ಸಂತೆ ಮೈದಾನದ ಆವರಣ, ಗೊರೂರು ರಸ್ತೆ ಒಣತ್ಯಾಜ್ಯ ಸಂಗ್ರಹಣ ಕೇಂದ್ರ, ಪಾಯಣ್ಣ ಸರ್ಕಲ್, ನಗರಸಭಾ ಕಚೇರಿ ಮುಂಭಾಗ, ಕುವೆಂಪುನಗರ, ಜ್ಞಾನಾಕ್ಷಿ ಕಲ್ಯಾಣ ಮಂಟಪ ಮುಂಭಾಗದ ನಗರಸಭೆಯ ಪಾರ್ಕ್, ಎಂ.ಸಿ.ಇ ಕಾಲೇಜು ಕಾಂಪೌಂಡ್ ಪಕ್ಕ, ತನ್ವಿ ತ್ರಿಶಾ ಕಲ್ಯಾಣ ಮಂಟಪದ ಹಿಂಭಾಗ ಮರುಬಳಕೆ ಸಾಮಗ್ರಿ ನೀಡಲು ಮೇ 25ರಿಂದ ಜೂನ್ 05ರವರೆಗೆ ಈ ಘಟಕಗಳು ಕಾರ್ಯನಿರ್ವಹಿಸಲಿವೆ. ಮನೆಯಲ್ಲಿ ಬಳಕೆಯಾಗದೆ ನಿರುಪಯುಕ್ತವಾಗಿರುವ ಆಟಿಕೆ ವಸ್ತುಗಳು, ಬಟ್ಟೆಗಳು, (ಹಳೆಯ ಜೀನ್ಸ್ ಸಮವಸ್ತ್ರ ಮತ್ತು ಸೀರೆಗಳು ಮತ್ತು ಮರುಬಳಕೆ ಮಾಡಬಹುದಾದ ಬಟ್ಟೆಗಳು) ದಿನಪತ್ರಿಕಗಳು, ಮಾಸಪತ್ರಿಕೆಗಳು, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಸಾಮಗ್ರಿಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಸಂಗ್ರಹಿಸಲು ತ್ಯಾಜ್ಯ ಮರುಬಳಕೆಯ ಕೇಂದ್ರಗಳನ್ನು ತೆರಯಲಾಗಿದೆ. ಸಾರ್ವಜನಿಕರು ಮೇ 25ರಿಂದ ಜೂನ್ 5 ರವರೆಗೆ ಮರುಬಳಕೆ ಮಾಡಬಹುದಾದ ಸಾಮಗ್ರಿಗಳನ್ನು ನೀಡಬಹುದಾಗಿದೆ.
ಈ ಕೇಂದ್ರಗಳನ್ನು ನಿರ್ವಹಣೆ ಮಾಡಲು ಆಸಕ್ತ ಎನ್‌ಜಿಒ, ಸ್ತ್ರೀಶಕ್ತಿ ಸಂಘ- ಸಂಸ್ಥೆಗಳು ನಿರ್ವಹಣೆ ಮಾಡಬಹುದಾಗಿದ್ದು ಆಸಕ್ತರು ನಗರಸಭಾ ಕಚೇರಿಯ ಆರೋಗ್ಯ ಶಾಖೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಅಥವಾ ಸಹಾಯವಾಣಿ 8073103727 ಸಂಖ್ಯೆಗೆ ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಕರೆ ಮಾಡಬಹುದು ಎಂದು ಹಾಸನ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್