More

  ಮರಾಠ ಸಮುದಾಯ ಪ್ರಗತಿಗೆ ಬದ್ಧ


  ಗೋಕಾಕ: ಕ್ಷತ್ರಿಯ ಮರಾಠ ಸಮುದಾಯ ಸಂಘಟಿತವಾದರೆ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 10 ಕ್ಷೇತ್ರಗಳಲ್ಲಿ ನಿರ್ಣಾಯಕವಾಗಲಿದ್ದು, ಅವರ ಬೆಂಬಲದಿಂದ ಮೂರು ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲವು ಸಾಧಿಸಬಹುದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

  ನಗರದ ನ್ಯೂ ಇಂಗ್ಲಿಷ್ ಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕ್ಷತ್ರಿಯ ಮರಾಠ ಸಮುದಾಯದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರಾಠ ಸಮುದಾಯದ ಪ್ರಭಾವ ಹೆಚ್ಚಿದ್ದರೂ ರಾಜಕೀಯವಾಗಿ ಪ್ರಾಶಸ್ತ್ಯ ಸಿಗದಿರುವುದು ಖೇದಕರ ಸಂಗತಿ ಎಂದರು.

  ರಾಜ್ಯದಲ್ಲಿ ಅಹಿಂದ ಸಮುದಾಯದ ಜತೆಗೆ ಮರಾಠಿಗರು ಕೂಡಿದರೆ ಶೇ.74 ಸಂಖ್ಯಾಬಲ ಆಗುತ್ತದೆ. ನನ್ನನ್ನು ಯಾರು ರಾಜಕೀಯವಾಗಿ ವಿರೋಧಿಸುತ್ತಾರೋ ಅವರಿಗೆ ಸೂಕ್ತ ಉತ್ತರ ನೀಡಲು ಸಿದ್ಧನಿದ್ದೇನೆ. ಮರಾಠ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಒತ್ತಾಯಿಸುತ್ತಲೇ ಬಂದಿದ್ದೇನೆ. ಸಮುದಾಯಕ್ಕೆ ಸಿಗಬೇಕಾಗಿರುವ ನ್ಯಾಯಯುತ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡೋಣ.

  ಸಮುದಾಯದ ಅಭಿವೃದ್ಧಿಗಾಗಿ ನಾವು ಬದ್ಧರಿದ್ದೇವೆ ಎಂದು ಹೇಳಿ, ಗೋಕಾಕ ನಗರಸಭೆಯಿಂದ 6 ಗುಂಟೆ ನಿವೇಶನದ ಠರಾವ್ ಪತ್ರವನ್ನು ಮರಾಠ ಸಮುದಾಯದ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಮರಾಠ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಿದರೆ ಒಳಿತಾಗಲಿದೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಮರಾಠ ಸಮುದಾಯದ ಪ್ರಗತಿಗೆ ನಾವೆಲ್ಲ ಸಿದ್ಧರಿದ್ದೇವೆ. ಶಿವಾಜಿ ಮಹಾರಾಜರು ಯಾವುದೇ ಜಾತಿಗೆ ಸೀಮಿತರಲ್ಲ. ಅವರು ಅಖಂಡ ಭಾರತ ನಿರ್ಮಾಣಕ್ಕೆ ಹೋರಾಡಿದ ಮಹಾನ್ ರಾಷ್ಟ್ರ ಭಕ್ತ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದರು.

  ಕ್ಷತ್ರಿಯ ಮರಾಠ ಒಕ್ಕೂಟದ ಅಧ್ಯಕ್ಷ ಶ್ಯಾಮಸುಂದರ ಗಾಯಕವಾಡ ಮಾತನಾಡಿ, ಮರಾಠ ಸಮುದಾಯವು ಮುಖ್ಯವಾಹಿನಿಗೆ ಬರಲು ಜಾರಕಿಹೊಳಿ ಸಹೋದರರ ಸಹಕಾರ ಅಗತ್ಯವಾಗಿದೆ. ಇಂತಹ ಸಮಾವೇಶಗಳನ್ನು ರಾಜ್ಯಾದ್ಯಂತ ಸಂಘಟಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

  ಬೆಂಗಳೂರು ಗೋಸಾಯಿ ಮಹಾಸಂಸ್ಥಾನ ಭವಾನಿ ದತ್ತ ಪೀಠದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಹಾಗೂ ಕಾದ್ರೊಳ್ಳಿಯ ಗುರುಪುತ್ರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಕುಮಾರಿ ಪೂಜಾ ಮಿಲ್ಕೆ ಭಾಷಣ ಮಾಡಿದರು. ಬೃಹತ್ ಕುಂಭ ಮೇಳದ ಶೋಭಾಯಾತ್ರೆಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಕೆಎಂಎ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು.

  ಮರಾಠ ಪ್ರಾಧಿಕಾರ ನಿಗಮದ ಅಧ್ಯಕ್ಷ ಮಾರುತಿರಾವ ಮುಳೆ, ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಸುರೇಶರಾವ ಸಾಠೆ, ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ವಿನಯ ಮಾಂಗಳೇಕರ, ಲೈಲಾ ಶುಗರ್ಸ್‌ ಅಧ್ಯಕ್ಷ ವಿಠ್ಠಲ ಹಲಗೇಕರ, ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ, ಮೋಹನ ಜಾಧವ, ಕಿರಣ ಜಾಧವ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ನಗರಸಭೆ ಸದಸ್ಯೆ ನಿರ್ಮಲಾ ಸುಭಂಜಿ, ಪ್ರಕಾಶ ಮುರಾರಿ, ಮುಖಂಡರಾದ ದಶರಥ ಗುಡ್ಡದಮನಿ, ಅಶೋಕ ತುಕ್ಕಾರ, ಜ್ಯೋತಿಬಾ ಸುಭಂಜಿ, ಪರಶುರಾಮ ಭಗತ, ಡಾ.ಗಿರೀಶ ಸೂರ್ಯವಂಶಿ, ರಾಜು ಪವಾರ, ನೇತಾಜಿ ಕೋರಾಡೆ, ಸಚಿನ ಜಾಧವ, ಜಿತೇಂದ್ರ ಮಾಂಗಳೇಕರ, ಗಜಾನನ ತಟ್ಟಿಮನಿ, ಯಮನಪ್ಪ ಬಾಗಾಯಿ, ವಸಂತ ತಹಸೀಲ್ದಾರ್, ಮಹಾದೇವ ಸಾವಂಜಿ, ಡಾ. ಹನುಮಂತ ಕಮತಗಿ, ವಿಜಯ ಜಾಧವ, ಬಾಬು ಖನಗಾಂವಿ, ಶಿವಾಜಿ ಜಾಧವ, ವಸಂತ ಬೆಳಗಲಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts