ಹಳಿಯಾಳ: ‘ಜಗತ್ತಿನ ಮರಾಠಾ ಸಮುದಾಯದವರು ಹೊಂದಿರುವ ಏಕೈಕ ಪೀಠ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಜಗದ್ಗುರುಗಳನ್ನಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಇದು ತಾಲೂಕಿನ ಸರ್ವರಿಗೂ ಸಂದ ಗೌರವ’ ಎಂದು ಗಾನಯೋಗಿ ವೇದಾಂತಾಚಾರ್ಯ ಕ್ಷತ್ರಿಯ ಮರಾಠಾ ಜಗದ್ಗುರು ಶ್ರೀ ಮಂಜುನಾಥ ಮಹಾರಾಜ ಹೇಳಿದರು.
ಪಟ್ಟಣದ ಮರಾಠಾ ಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಮರಾಠಾ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವ ಸಿದ್ಧತೆ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಹಿಂದವೀ ಸಾಮ್ರಾಜ್ಯ ಸಂಸ್ಥಾಪಕ ಛತ್ರಪತಿ ಮಹಾರಾಜರ ಕಾಲದಲ್ಲಿ ಶ್ರೀ ಗೋಸಾಯಿ ಮಹಾಸಂಸ್ಥಾನ ಸ್ಥಾಪನೆಯಾಗಿದೆ. ಏಪ್ರಿಲ್ 24, 25, 26ರಂದು ಪಟ್ಟಾಭೀಷೇಕ ಮಹೋತ್ಸವ ನಡೆಯಲಿದೆ. ದೇಶದೆಲ್ಲೆಡೆಯಿಂದ ವಿವಿಧ ಪೀಠಾಧೀಶರು, ಸಂತರು ಆಗಮಿಸಲಿದ್ದಾರೆ ಎಂದರು. ಮರಾಠಾ ಸಮುದಾಯದ ಯಲ್ಲಪ್ಪ ಮಾಳವಣಕರ ಮಾತನಾಡಿ, ಮರಾಠಾ ಸಮಾಜ ವನ್ನು ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಸದೃಢಗೊಳಿಸುವ ಜವಾಬ್ದಾರಿಯನ್ನು ಶ್ರೀಗಳಿಗೆ ನೀಡುತ್ತಿದ್ದೇವೆ ಎಂದರು.
ಮರಾಠಾ ಮಹಿಳಾ ಸಮುದಾಯದ ಮಂಗಲಾ ಕಶೀಲಕರ, ನಾರಾಯಣ ಕುಠ್ರೆ, ವಿಠ್ಠಲ ಮಿರಾಶಿ, ಸೋಣಪ್ಪ ಸುಣಕಾರ ಮಾತನಾಡಿದರು.
ಜ್ಞಾನೇಶ್ವರಿ ಪಾರಾಯಣ: ಏ. 24ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯುವ ಪಟ್ಟಾಭೀಷೇಕ ಮಹೋತ್ಸವ ಸಮಯದಲ್ಲಿ ಶ್ರೀಮದ್ಭಗವದ್ಗೀತಾ ಹಾಗೂ ಜ್ಞಾನೇಶ್ವರಿ ಪಾರಾ ಯಣ ನಡೆಯಲಿರುವುದರಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ವಾರಕರಿ ಸಂತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತೀರ್ವನಿಸಲಾಯಿತು. ಪಟ್ಟಾಭಿಷೇಕ ಸಮಾರಂಭಕ್ಕೆ ಹಳಿಯಾಳ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲು ಯೋಜಿಸಲಾಯಿತು. ಪಟ್ಟಾಭಿಷೇಕ ಮಹೋತ್ಸವದ ಸಿದ್ಧತೆಯ ಅಂಗವಾಗಿ ಎರಡನೇ ಸಭೆಯನ್ನು ಮಾ. 16ರಂದು ಮರಾಠಾ ಭವನದಲ್ಲಿ ನಡೆಸಲು ತೀರ್ವನಿಸಲಾಯಿತು.
ಪುರಸಭೆ ಸದಸ್ಯೆ ಶಾಂತಾ ಹಿರೇಕರ, ವಜ್ರೇಶ್ವರಿ ಶೆಟವಣ್ಣನವರ, ಪಾಗೋಜಿ ಸುತಾರ, ನಾಮದೇವ ಪಾಟೀಲ, ವಿಠ್ಠಲ ಮಳಿಕ, ಜೀವಪ್ಪ ಭಂಡಾರಿ ಉಪಸ್ಥಿತರಿದ್ದರು.