ಕಡೂರು: ಮರವಂಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಕೆ.ಶಿವಣ್ಣ, ಉಪಾಧ್ಯಕ್ಷರಾಗಿ ಬಿ.ಎಸ್. ಶಾಂತಕುಮಾರ್ ಆಯ್ಕೆಯಾದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಕೆ.ಶಿವಣ್ಣ ಮತ್ತು ದಿನೇಶ್ ಸ್ಪರ್ಧಿಸಿದ್ದು, ಶಿವಣ್ಣ 7 ಮತಗಳಿಸಿ ಗೆಲುವು ಸಾಧಿಸಿದರೆ, ದಿನೇಶ್ 6 ಮತಗಳಿಸಿ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದ ಶಾಂತಕುಮಾರ್ 7 ಮತಗಳಿಸಿದರೆ ರಂಗಪ್ಪ 6 ಮತಗಳಿಸಿ ಸೋತರು. ಚುನಾವಣಾಧಿಕಾರಿಯಾಗಿ ಕೆ.ವಿ.ಕಲ್ಲೇಶಪ್ಪ ಕಾರ್ಯನಿರ್ವಹಿಸಿದರು.
ಅಭಿನಂದನಾ ಸಭೆಯಲ್ಲಿ ಅಧ್ಯಕ್ಷ ಶಿವಣ್ಣ ಮಾತನಾಡಿ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರ ಸಹಕಾರ, ಮಾರ್ಗದರ್ಶನದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದೇವೆ. ಉತ್ತಮ ಆಡಳಿತ ನೀಡುವುದರ ಮೂಲಕ ರೈತರ ಪರವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.
ನಿರ್ದೇಶಕರಾದ ಎಚ್.ಟಿ.ದೇವರಾಜ್, ಎಂ.ಆರ್.ಸತೀಶ್, ಎಂ.ಆರ್.ಹರೀಶ್, ರಾಮಕ್ಕ, ಗ್ರಾಮಸ್ಥರಾದ ಚಿನ್ನುದೇವರಾಜ್, ನಾಗರಾಜ್, ಮಲ್ಲೇಶಪ್ಪ, ಜಯಣ್ಣ, ಮಂಜಣ್ಣ, ಮೈಲಾರಪ್ಪ, ಅಶೋಕ್, ರುದ್ರೇಶ್ ಮತ್ತು ಚಿನ್ನಕಾರಹಳ್ಳಿ, ಹೋಚಿಹಳ್ಳಿ ಮತ್ತು ಮರವಂಜಿ ಗ್ರಾಮಸ್ಥರು ಇದ್ದರು.