ಶೃಂಗೇರಿ: ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಸಾಗಣೆ ತಡೆಗಟ್ಟಲು ತುಂಗಾ ನದಿ ಪಾತ್ರದಿಂದ ಅನತಿ ದೂರದಲ್ಲಿ ತಾಲೂಕು ಆಡಳಿತ ಕಂದಕ ನಿರ್ಮಾಣ ಮಾಡಿ ಮರಳು ದಂಧೆಗೆ ಕಡಿವಾಣ ಹಾಕಿದೆ.
ತಹಸೀಲ್ದಾರ್ ಅನುಪ್ ಸಂಜೋಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮರಳು ದಂಧೆ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ವಾಹನಗಳು ನದಿಪಾತ್ರಕ್ಕೆ ಹೋಗದಂತೆ ಕಂದಕ ನಿರ್ಮಾಣ ಮಾಡಿದ್ದಾರೆ.
ತಾಲೂಕು ಕಚೇರಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮರಳು ದಂಧೆಗೆ ಕಡಿವಾಣ ಹಾಕುವ ಬಗ್ಗೆ ದಿಟ್ಟ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಕಳೆದ ತಿಂಗಳು ಪಟ್ಟಣದ ಗಾಂಧಿ ಮೈದಾನ ಸಮೀಪ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಜೆಸಿಬಿ ಹಾಗೂ ಎರಡು ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದರು. ತಾಲೂಕಿನಲ್ಲಿ ಈ ಹಿಂದೆ ಮರಳು ಸಾಗಣೆ ನಡೆಸಲು ಜಿಲ್ಲಾಡಳಿತದಿಂದ ಐದು ಪಾಯಿಂಟ್ ಗುರುತಿಸಲಾಗಿದ್ದು, ಅಡ್ಡಗದ್ದೆ ಎರಡು ಪಾಯಿಂಟ್, ಹಾಲಂದೂರು ಬೆಣ್ಣೆಗುಡ್ಡೆ ಹಾಗೂ ಕಿರಕೋಡಿನಲ್ಲಿ ಮರಳು ಹರಾಜು ಪ್ರಕ್ರಿಯೆ ನಡೆಸಲಾಗುತ್ತಿತ್ತು. ಆದರೆ ಸರ್ಕಾರ ಮರುಳಿನ ಬಿಡ್ ಪ್ರಕ್ರಿಯೆಯನ್ನು ಈಗ ನಿಲ್ಲಿಸಿರುವುದರಿಂದ ದಿನವಿಡೀ ಮರಳು ದಂಧೆಕೋರರು ನದಿ ಬಗೆದು ಮರಳನ್ನು ಸಾಗಿಸುತ್ತಿದ್ದಾರೆ.
ಪಟ್ಟಣ ಸೇರಿದಂತೆ ಸಚ್ಚಿದಾನಂದಪುರ, ಮೀಗಾ, ಬೇಗಾರು, ಮೆಣಸೆ, ಕಲ್ಕಟ್ಟೆ, ಮಸಿಗೆ, ನಲ್ಲೂರುಕೊಲ್ಲಿ, ಗುಂಡ್ರೆ, ಕಾನೊಳ್ಳಿ ಮುಂತಾದ ಕಡೆಗಳಲ್ಲಿ ಮರಳುದಂಧೆ ನಡೆಸಲಾಗುತ್ತಿದೆ. ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸಮಿತಿ ರಚಿಸಿದ್ದು, ಈ ತಂಡವನ್ನು ಆ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಗಸ್ತು ತಿರುಗುತ್ತಿರುವುದರಿಂದ ಮರಳು ಸಾಗಣೆಗೆ ಕಡಿವಾಣ ಬಿದ್ದಿವೆ.