More

  ಮರಳು ವಿತರಣೆ ಜವಾಬ್ದಾರಿ ಹಟ್ಟಿ ಚಿನ್ನದ ಗಣಿ ಕಂಪನಿಗೆ?

  ರಾಣೆಬೆನ್ನೂರ: ತಾಲೂಕಿನ ತುಂಗಭದ್ರಾ ನದಿಪಾತ್ರದ ಬ್ಲಾಕ್​ಗಳು ಸೇರಿ ರಾಜ್ಯದ ಎಲ್ಲ ಸರ್ಕಾರಿ ಮರಳಿನ ಬ್ಲಾಕ್​ಗಳು ಇನ್ಮುಂದೆ ಹಟ್ಟಿ ಚಿನ್ನದ ಗಣಿ ಕಂಪನಿ ಕೈ ಸೇರಲಿವೆಯೇ?

  ಸರ್ಕಾರದ ಮಟ್ಟದಲ್ಲಿ ಈ ಕುರಿತು ಚಿಂತನೆ ನಡೆದಿದೆ. ಒಂದು ವೇಳೆ ಸರ್ಕಾರವು ಹಟ್ಟಿ ಚಿನ್ನದ ಗಣಿ ಕಂಪನಿಗೆ ಮರಳು ವಿತರಣೆ ಜವಾಬ್ದಾರಿ ನೀಡಿದರೆ, ಇಷ್ಟು ದಿನಗಳ ಕಾಲ ನಿರ್ವಿುತಿ ಕೇಂದ್ರದವರು ನಡೆಸುತ್ತಿದ್ದ ಮರಳುಗಾರಿಕೆ ಸ್ಥಗಿತಗೊಳ್ಳಲಿದೆ.

  ತಾಲೂಕಿನ ತುಂಗಭದ್ರಾ ನದಿಪಾತ್ರದ ಉದಗಟ್ಟಿ, ಹರನಗಿರಿ, ಬೇಲೂರು, ಚಂದಾಪುರ ಮರಳಿನ ಬ್ಲಾಕ್​ಗಳಿಗೆ ಹಟ್ಟಿ ಚಿನ್ನದ ಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಸಲ್ಮಾ ಕೆ. ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದು, ಅವರು ಒಪ್ಪಿಗೆ ಸೂಚಿಸಿದರೆ ಸರ್ಕಾರ ಬ್ಲಾಕ್​ಗಳನ್ನು ಲೀಸ್ ನೀಡಲಿದೆ ಎಂಬ ಮಾಹಿತಿಯಿದೆ.

  ಇದಕ್ಕಾಗಿಯೇ ಹಟ್ಟಿ ಚಿನ್ನದ ಗಣಿ ಕಂಪನಿ ತಂಡದವರು ತಾಲೂಕಿನಲ್ಲಿ ಉಳಿದುಕೊಂಡಿದ್ದು, ತುಂಗಭದ್ರಾ ನದಿಯುದ್ದಕ್ಕೂ ಮರಳಿನ ಬ್ಲಾಕ್​ಗಳನ್ನು ಪರಿಶೀಲಿಸುತ್ತಿದ್ದಾರೆ. ಸೂಕ್ತ ರೀತಿಯಲ್ಲಿ ಮರಳು ಗಣಿಗಾರಿಕೆ ಮಾಡದ ಕಾರಣ ಸರ್ಕಾರಿ ಬ್ಲಾಕ್​ಗಳು ಹಾಗೂ ಕೆಲ ಖಾಸಗಿ ಬ್ಲಾಕ್​ಗಳು ಬಂದ್ ಆಗಿವೆ. ಈ ಪ್ರದೇಶದಲ್ಲಿ ಆಗಿರುವ ಸಮಸ್ಯೆ, ನೀರಿನ ಹರಿವಿನ ಪ್ರಮಾಣ, ಎಷ್ಟು ಪ್ರಮಾಣದಲ್ಲಿ ಮರಳು ಲಭ್ಯವಾಗಲಿದೆ, ಮರಳು ಗಣಿಗಾರಿಕೆ ಪುನಃ ಆರಂಭಿಸಿದರೆ ಪರಿಸರದ ಮೇಲೆ ಆಗುವ ಪರಿಣಾಮ ಮುಂತಾದ ಅಂಶಗಳ ಕುರಿತು ಹಟ್ಟಿ ಚಿನ್ನದ ಗಣಿ ಕಂಪನಿಯ ತಂಡ ಅಧ್ಯಯನ ಮಾಡುತ್ತಿದೆ.

  ಸರ್ಕಾರಿ ಕಾಮಗಾರಿಗೆ ಮಾತ್ರ ಮರಳು: ಇಷ್ಟು ದಿನಗಳ ಕಾಲ ಜಿಲ್ಲಾ ನಿರ್ವಿುತಿ ಕೇಂದ್ರದವರು ಪಾಸ್ ಪಡೆದು ಸರ್ಕಾರಿ ಕಾಮಗಾರಿಗೆ ಹಾಗೂ ಖಾಸಗಿಯವರಿಗೆ ಮರಳು ವಿತರಿಸುತ್ತಿದ್ದರು. 2020ರ ಹೊಸ ಮರಳು ನೀತಿ ಪ್ರಕಾರ ಮರಳು ವಿತರಣೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ಒಪ್ಪಿಗೆ ಸೂಚಿಸಿದರೆ, ಸರ್ಕಾರ ಲೀಸ್ ನೀಡಲಿದೆ ಎಂಬ ಕುರಿತು ಚರ್ಚೆಯಾಗುತ್ತಿದೆ.

  ಹಟ್ಟಿ ಚಿನ್ನದ ಗಣಿ ಕಂಪನಿ ಲೀಸ್ ಪಡೆದ ಬಳಿಕ ಆಶ್ರಯ ಮನೆ ನಿರ್ವಣ, ಚರಂಡಿ, ಕಾಂಕ್ರೀಟ್ ರಸ್ತೆ, ಗಟಾರು ಸೇರಿದಂತೆ ಸರ್ಕಾರಿ ಕಾಮಗಾರಿಗೆ ಮಾತ್ರ ಮರಳು ವಿತರಿಸುವರು. ಖಾಸಗಿಯವರಿಗೆ ಮರಳು ಬೇಕಾದರೆ ಖಾಸಗಿ ಬ್ಲಾಕ್​ಗಳಿಂದಲೇ ಮರಳು ಪಡೆದುಕೊಳ್ಳಬೇಕು ಎಂದು ಹೇಳಲಾಗುತ್ತಿದೆ.

  ಆದರೆ, ಸದ್ಯ ಈ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದ್ದು, ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಯನ ಪೂರ್ಣಗೊಳಿಸಿದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ನಂತರದಲ್ಲಿ ಮರಳು ವಿತರಣೆಗೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts