ಮರಗಳಿಗೆ ಅಳವಡಿಸಿದ್ದ ಬ್ಯಾನರ್ ತೆರವು

ಧಾರವಾಡ: ಹು- ಧಾ ಅವಳಿನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನುಮತಿ ಇಲ್ಲದೆ ಮರಗಳಿಗೆ ಜಾಹೀರಾತು ಫಲಕ, ಫ್ಲೆಕ್ಸ್ ಹಾಗೂ ಬ್ಯಾನರ್​ಗಳನ್ನು ಅಳವಡಿಸಲಾಗುತ್ತಿದೆ. ಇದು ಮರಗಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅರಣ್ಯ ಹಾಗೂ ಪಾಲಿಕೆ ಕಾಯ್ದೆ ಅನ್ವಯ ಜಾಹೀರಾತಿನಲ್ಲಿ ಕಾಣಿಸಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಧಾರವಾಡ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ. ಮಂಜುನಾಥ ಹೇಳಿದರು.

ಹಸಿರು ಕರ್ನಾಟಕ ಆಂದೋಲನದ ಅಂಗವಾಗಿ ನಗರದ ಕರ್ನಾಟಕ ಕಾಲೇಜ್ ವೃತ್ತದದಲ್ಲಿ ಜಾಹೀರಾತು ಫಲಕ ಮುಕ್ತ ಮರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೈಸರ್ಗಿಕವಾಗಿ ಗಾಳಿ, ನೀರು, ಬೆಳಕು ಪಡೆದು ಬೆಳೆಯಬೇಕಾದ ಮರಗಳಿಗೆ ಕಂಬಿ ಕಟ್ಟುವುದು, ಹಗ್ಗ- ತಂತಿ ಬಿಗಿಯುವುದು ಮತ್ತು ಮೊಳೆ ಹೊಡೆದು ಅನೇಕ ರೀತಿಯ ಜಾಹೀರಾತುಗಳನ್ನು ಹಾಕಲಾಗುತ್ತಿದೆ. ಇದರಿಂದ ಮರಗಳು ಒಣಗಿ ಹೋಗುವ ಸಾಧ್ಯತೆಯೂ ಇದೆ. ಇನ್ನು ಮುಂದೆ ಮರಗಳಿಗೆ ಜಾಹೀರಾತು ಅಂಟಿಸಿದರೆ ಅಥವಾ ಅಳವಡಿಸಿದರೆ ಸಂಬಂಧಪಟ್ಟವರ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶಕುಮಾರ ಮಾತನಾಡಿ, ಆ. 15ರಿಂದ ಹಸಿರು ಕರ್ನಾಟಕ ಯೋಜನೆಯಲ್ಲಿ ಸಸಿಗಳನ್ನು ಜಿಲ್ಲೆಯಾದ್ಯಂತ ನೆಡಲಾಗುತ್ತಿದೆ. ಜೊತೆಗೆ ವಿವಿಧ ಸಂಘ ಸಂಸ್ಥೆ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರ ವ್ಯಾಪ್ತಿಯಲ್ಲಿನ ಮರಗಳಿಗೆ ಅನಧಿಕೃವಾಗಿ ಅಳವಡಿಸಿರುವ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.

ನೇಚರ್ ಫಸ್ಟ್ ಸಂಸ್ಥೆಯ ಮುಖ್ಯಸ್ಥ ಪಿ.ವಿ. ಹಿರೇಮಠ ಮಾತನಾಡಿ, ಆ. 18ರಿಂದ 10 ದಿನಗಳವರೆಗೆ ವಿವಿಧ ಸಂಘ, ಸಂಸ್ಥೆ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಯೋಗದಲ್ಲಿ ನಗರದಲ್ಲಿನ ಮರದ ಮೇಲೆ ಅಳವಡಿಸಿರುವ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು ಎಂದರು. ಪಾಲಿಕೆಯ ಸಹಾಯಕ ಆಯುಕ್ತ ರಂಜೀತಕುಮಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.