ಮನ ಸೆಳೆಯುವ ಸರ್ಕಾರಿ ಶಾಲೆ

ಶಶಿಧರ ಕುಲಕರ್ಣಿ ಮುಂಡಗೋಡ: ಮುಖ್ಯ ದ್ವಾರ ಪ್ರವೇಶ ಮಾಡುತ್ತಿದ್ದಂತೆಯೇ ಯಾವುದೋ ಉದ್ಯಾನಕ್ಕೆ ತೆರಳಿದ ಅನುಭವ. ಆವರಣದ ತುಂಬೆಲ್ಲ ಹಸಿರು ವಾತಾವರಣ. ಸುತ್ತಲಿನ ಕಾಂಪೌಂಡ್ ಗೋಡೆಗಳಿಗೂ ಹಸಿರು ಬಣ್ಣದ ಹೊದಿಕೆ.

ಹೌದು, ಇದು ತಾಲೂಕಿನ ಮಳಗಿ ಗ್ರಾಮದ ಅನತಿ ದೂರದಲ್ಲಿರುವ ಧರ್ವ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಸಿರೀಕರಣದ ಕಥೆ. ಈ ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಎಡ ಮತ್ತು ಬಲ ಭಾಗದಲ್ಲಿ ನಾನಾ ತರದ ಅಂದದ ಗಿಡಗಳಿದ್ದು, ತಲೆಬಾಗಿ ನಿಂತು ಸ್ವಾಗತಿಸುವಂತಿವೆ.

ಶಾಲೆ ಆವರಣದಲ್ಲಿ ಫೈಕಸ್, ಸೈಕಸ್, ಅಮೆರಿಕದ ಒಂದೆಲಗಾ, ಸಾರೆಕಾ (ಸೀತಾ) ಅಶೋಕಾ ಹಾಗೂ ಔಷಧಿ ಗಿಡಗಳಾದ ಆಲ, ಎಕ್ಕೆ, ನೆಲ್ಲಿ, ಒಂದೆಲಗಾ, ಅಂಟವಾಳ ಮುಂತಾದ ಗಿಡಗಳನ್ನು ಮುಖ್ಯೋಪಾಧ್ಯಾಯ ಮಂಜುನಾಥ ಪುರ್ಲಿ, ಶಿಕ್ಷಕರಾದ ಪ್ರದೀಪ ಕುಲಕರ್ಣಿ ಹಾಗೂ ಕೆ.ಎಂ. ನಾಯ್ಕ, ಮಕ್ಕಳು ಗ್ರಾಮಸ್ಥರ ನೆರವಿನಿಂದ ಬೆಳೆಸಿ ಶಾಲೆಯನ್ನು ಹಸಿರುಮಯಗೊಳಿಸಿದ್ದಾರೆ.

ಇನ್ನು ಇದೇ ರೀತಿ ಶಾಲೆಯ 2 ಎಕರೆ 30ಗುಂಟೆ ಜಾಗದಲ್ಲಿ ಬಾಳೆ, ಮಾವು, ಹಲಸು, ನೇರಲ, ಚಿಕ್ಕು, ಗೇರು ಗಿಡಗಳನ್ನು ಬೆಳೆದಿದ್ದು, ಅವುಗಳ ಫಲಗಳನ್ನು ಮಕ್ಕಳಿಗೆ ಸರದಿಯಾಗಿ ಹಂಚಲಾಗುತ್ತದೆ. 17 ತೆಂಗಿನ ಗಿಡಗಳಿಂದ ಬರುವ ಕಾಯಿಗಳನ್ನು ಶಾಲೆಯ ಬಿಸಿಯೂಟಕ್ಕೆ ಬಳಸಲಾಗುತ್ತದೆ. ಅಲ್ಲದೆ, 40 ಅಡಕೆ ಮತ್ತು 183 ಸಾಗವಾನಿ ಗಿಡಗಳನ್ನೂ ಬೆಳೆಸಲಾಗಿದೆ.

ಬಿಸಿಯೂಟಕ್ಕೆ ಬಳಕೆ: ಪ್ರತಿ ಶುಕ್ರವಾರದಂದು ಮಕ್ಕಳ ಆಸಕ್ತಿಯ ಮೇರೆಗೆ ವಿವಿಧ ಬಗೆಯ ಸಿಹಿ ತಿಂಡಿ ತಯಾರಿಸಿ ಮಕ್ಕಳಿಗೆ ಉಣಬಡಿಸಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟದ ಮೊದಲು ಮಕ್ಕಳು ಕಥೆ ಹೇಳುವುದು ಅಥವಾ ಪ್ರಾರ್ಥನೆ ಮಾಡುವ ರೂಢಿ ಬೆಳೆಸಲಾಗಿದೆ.

ಮಕ್ಕಳು ಪ್ರತಿಭಾ ಕಾರಂಜಿ ಹಾಗೂ ಆಟೋಟಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯೋಗ ಸ್ಪರ್ಧೆಯಲ್ಲಿ 7ಬಾರಿ ವಿಭಾಗ ಮಟ್ಟ ಮತ್ತು 1 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. 2013ರಲ್ಲಿ ಜರುಗಿದ ಪರಿಸರ ಮಿತ್ರ ಕಾರ್ಯಕ್ರಮದಲ್ಲಿ ‘ಕಿತ್ತಳೆ ಶಾಲೆ’ ಪ್ರಶಸ್ತಿಗೆ ಶಾಲೆ ಭಾಜನವಾಗಿದೆ. ಒಟ್ಟಿನಲ್ಲಿ ಈ ಶಾಲೆಯಲ್ಲಿನ ಶಿಸ್ತು, ರಮಣೀಯ ವಾತಾವರಣ ಹಾಗೂ ಪಠ್ಯೇತರ ಚಟುವಟಿಕೆಗಳು ತಾಲೂಕಿನ ಇತರ ಶಾಲೆಗಳಿಗೆ ಮಾದರಿಯಾಗಿದೆ.

ಶೌಚಗೃಹ: ಶಾಲೆಗೆ ಸುಸಜ್ಜಿತ ಮೈದಾನ, ನೀರು ಹಾಗೂ ಎಲ್ಲ ವ್ಯವಸ್ಥೆಗಳಿವೆ. ಆದರೆ, ಶೌಚಗೃಹ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಈ ಕಟ್ಟಡದ ಪುನರ್ ನಿರ್ವಣದ ಅವಶ್ಯಕತೆ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂಬುದು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಹಾಗೂ ಮಕ್ಕಳ ಕೋರಿಕೆಯಾಗಿದೆ.

———

ಶಿರಸಿಯಿಂದ ಸಸಿಗಳನ್ನು ತಂದು ಶಾಲೆ ಆವರಣದಲ್ಲಿ ನೆಟ್ಟಿರುತ್ತೇವೆ. ಎಸ್​ಡಿಎಂಸಿಯವರು ಕಾಲಕಾಲಕ್ಕೆ ಉದ್ಯಾನದ ಕಳೆಯನ್ನು ತೆಗೆಸಿ ಗೊಬ್ಬರ ನೀಡುವಲ್ಲಿ ಸಹಕಾರ ನೀಡುತ್ತ ಬಂದಿದ್ದಾರೆ. | ಮಂಜುನಾಥ ಪುರ್ಲಿ ಮುಖ್ಯೋಪಾಧ್ಯಾಯ

ಉದ್ಯಾನದ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ, ಶಿಕ್ಷಕರು ಮತ್ತು ಮಕ್ಕಳ ಪರಿಶ್ರಮ ತುಂಬಾ ಇದೆ. ಮುಂದೆ ಕೂಡ ಇದೇ ರೀತಿಯ ಆಸಕ್ತಿಯನ್ನು ಮುಂದುವರಿಸಿಕೊಂಡು ಶಾಲೆಯ ಉದ್ಯಾನವನ್ನು ಇನ್ನಷ್ಟು ಸುಂದರಗೊಳಿಸುತ್ತೇವೆ. | ಹನುಮಂತ ಹಸ್ಲರ ಎಸ್​ಡಿಎಂಸಿ ಅಧ್ಯಕ್ಷ