ಮನ್ಸೂರ ಧಾಟಿಗೆ ಮನಸೋತಿದ್ದ ಸಾಹಿತಿ

ಧಾರವಾಡ: ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಾಗಿ 3 ವರ್ಷ ಪೂರ್ಣಗೊಂಡಿದ್ದು, ನಗರದ ಕರ್ನಾಟಕ ಕಾಲೇಜು ಆವರಣದ ಸೃಜನಾ ರಂಗಮಂದಿರದಲ್ಲಿ ದಕ್ಷಿಣಾಯಣ ಕರ್ನಾಟಕ ವತಿಯಿಂದ ಗುರುವಾರ ಶಾಂತಿಗಾಗಿ ಸಂಗೀತ ಕಾರ್ಯಕ್ರಮ ಜರುಗಿತು.

ಖ್ಯಾತ ಗಾಯಕ ಪಂ. ಎಂ. ವೆಂಕಟೇಶಕುಮಾರ ಅವರು ಮಾತನಾಡಿ, ಡಾ. ಕಲಬುರ್ಗಿ ಅವರು ವಚನಗಳ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಸಿನಿಮಾ ಧಾಟಿಯಲ್ಲಿ ವಚನ ಹಾಡುವುದು ಬೇಡ, ಮಲ್ಲಿಕಾರ್ಜುನ ಮನ್ಸೂರರ ಧಾಟಿಯಲ್ಲಿ ಹಾಡಬೇಕು ಎನ್ನುತ್ತಿದ್ದರು. ವಚನದೊಳಗೆ ತತ್ತ್ವ, ಸಾರ ಇದೆ. ಹೀಗಾಗಿ ಸರಿಯಾದ ಧಾಟಿ ಹಚ್ಚಬೇಕು ಎಂದು ಸಂಗೀತಗಾರರಿಗೆ ಪ್ರೋತ್ಸಾಹಿಸುತ್ತಿದ್ದರು ಎಂದು ಸ್ಮರಿಸಿದರು.

ಸಂಗೀತ ಕಣ್ಣಿಗೆ ಕಾಣುವುದಿಲ್ಲ. ಕಿವಿಗೆ ಕೇಳಿಸುತ್ತದೆ. ಹಾಗೆಯೇ ದೇವರು ಕಾಣುವುದಿಲ್ಲವಾದರೂ ಅನುಭೂತಿ ಆಗುತ್ತದೆ. ಹೀಗಾಗಿ ಕಲಬುರ್ಗಿ ಅವರಿಗೆ ಸ್ವರ ಆರಾಧನೆ ಮಾಡುತ್ತಿದ್ದೇನೆ ಎಂದರು.

ಪ್ರೊ. ಜಿ.ಎನ್. ದೇವಿ ಮಾತನಾಡಿ, ಇಲ್ಲಿಯವರೆಗೆ ನಾವು ಕಲಬುರ್ಗಿ ಹಂತಕರ ಪತ್ತೆಗಾಗಿ ಹೋರಾಟ ಮಾಡಿದ್ದೇವೆ. ಆದರೆ ಈಗ ಶಾಂತಿಗಾಗಿ ಸಂಗೀತದ ಮೂಲಕ ಜನರ ಮನಸ್ಸುಗಳಲ್ಲಿ ಶಾಂತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಈ ಸಂಗೀತದ ಶಾಂತಿ ದಾಬೋಲ್ಕರ್, ಪಾನ್ಸರೆ, ಕಲಬುರ್ಗಿ ಮತ್ತು ಗೌರಿ ಲಂಕೇಶರಿಗೆ ಗುಂಡು ಹಾಕಿದವರ ಮನಸ್ಸಿಗೆ ತಟ್ಟಬೇಕು ಎಂದರು.

ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಡೋಜ ಡಾ. ಚೆನ್ನವೀರ ಕಣವಿ, ಉಮಾದೇವಿ ಕಲಬುರ್ಗಿ, ಶಶಿಧರ ನರೇಂದ್ರ, ಇತರರು ಉಪಸ್ಥಿತರಿದ್ದರು.

ಪಂ. ಎಂ. ವೆಂಕಟೇಶಕುಮಾರ ಅವರು ವಚನಗಳು, ಹರಿನಾಮ ಸ್ಮರಣೆಯನ್ನು ಪ್ರಸ್ತುತಪಡಿಸಿದರು. ಮೊದಲಿಗೆ ಗಣ್ಯರು ಎಂ.ಎಂ. ಕಲಬುರ್ಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಎಸ್​ಐಟಿ ತನಿಖೆಯಲ್ಲಿ ಪ್ರಗತಿ ಕಾಣುತ್ತಿದೆ

ನರೇಂದ್ರ ದಾಬೋಲ್ಕರ್ ಹತ್ಯೆಯಾದಾಗಲೇ ಹಂತಕರನ್ನು ಪತ್ತೆ ಮಾಡಿದ್ದರೆ, ಉಳಿದ ಮೂವರ ಜೀವ ಉಳಿಯುತ್ತಿತ್ತು ಎಂದು ಡಾ. ಕಲಬುರ್ಗಿ ಅವರ ಪುತ್ರ ಶ್ರೀವಿಜಯ ಕಲಬುರ್ಗಿ ಹೇಳಿದರು.

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹತ್ಯೆಯಾದಾಗಲೇ ಜವಾಬ್ದಾರಿ ಸ್ಥಾನದಲ್ಲಿದ್ದವರೆಲ್ಲ ಕಾಳಜಿಯಿಂದ ಕೆಲಸ ಮಾಡಿದ್ದರೆ ಮುಂದಿನ ಮೂರು ಹತ್ಯೆಗಳು ನಡೆಯುತ್ತಿರಲಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್​ಐಟಿ ತನಿಖೆ ಪ್ರಗತಿ ಕಾಣುತ್ತಿದೆ. ಇದರಿಂದ ಸಿಐಡಿಯವರಿಗೆ ಸಹಾಯವಾಗುತ್ತದೆ. ಈ ಮೂಲಕ ಪ್ರಕರಣ ತನಿಖೆಯನ್ನು ಬೇಗ ಮುಗಿಸಬಹುದು. ಸರ್ಕಾರ ತನಿಖಾ ಸಂಸ್ಥೆಗಳಿಗೆ ಸ್ವಾತಂತ್ರ್ಯ ಕೊಟ್ಟರೂ ತನಿಖೆ ವಿಳಂಬವಾಗುತ್ತಿದೆ. ತನಿಖೆಯ ಫಲಿತಾಂಶ ಶೀಘ್ರವಾಗಿ ಗೊತ್ತಾಗಬೇಕಿದೆ ಎಂದರು.