ಮನ್ಸೂರ್​ನ ಇನ್ನಷ್ಟು ಖಜಾನೆಗೆ ಶೋಧ

ಬೆಂಗಳೂರು: ಬಹುಕೋಟಿ ವಂಚನೆ ಮಾಡಿರುವ ಐಎಂಎ ಕಂಪನಿ ಆಭರಣ ಮಳಿಗೆ ಶೋಧ ಮುಂದುವರಿದಿದೆ. ಮಂಗಳವಾರ ತಿಲಕ್​ನಗರ ಮತ್ತು ಯಶವಂತಪುರದಲ್ಲಿ ಮಳಿಗೆ ಪರಿಶೀಲಿಸಿದ್ದು, 83.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

ಎಸ್​ಐಟಿ ಎಸ್​ಪಿ ಎಸ್. ಗಿರೀಶ್ ನೇತೃತ್ವದಲ್ಲಿ 2 ಪ್ರತ್ಯೇಕ ತಂಡಗಳು ತಿಲಕ್​ನಗರ ಮತ್ತು ಯಶವಂತಪುರದ ಗೋಲ್ಡ್ ಕಂಪನಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದವು. ತಿಲಕ್​ನಗರದ ಮಳಿಗೆಯಲ್ಲಿ 41.6 ಲಕ್ಷ ರೂ. ಮೌಲ್ಯದ 1.3 ಕೆಜಿ ಚಿನ್ನಾಭರಣಗಳು, 2.2 ಲಕ್ಷ ರೂ ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು 2 ಸಾವಿರ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.

ಯಶವಂತಪುರದಲ್ಲಿ ಮಳಿಗೆಯಲ್ಲಿಯೂ ಅಡಮಾನ ಇಟ್ಟುಕೊಂಡು ಕೆಲವರಿಗೆ ಬಡ್ಡಿ ರಹಿತವಾಗಿ ಕೆಲವರಿಗೆ ಬಡ್ಡಿಗಾಗಿ ಸಾಲ ನೀಡಲಾಗಿದೆ. 31.04 ಲಕ್ಷ ರೂ. ಮೌಲ್ಯದ 970 ಗ್ರಾಂ ಚಿನ್ನ, 8.4 ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತು ವಶಕ್ಕೆ ಪಡೆಯಲಾಗಿದೆ. ಶುಕ್ರವಾರದಿಂದ ಮಂಗಳವಾರದವರೆಗೂ ನಡೆದಿರುವ ದಾಳಿಯಲ್ಲಿ ಸಿಕ್ಕಿರುವ ಆಸ್ತಿ ಮೌಲ್ಯ 13 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಎಸ್​ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಸುಗಂಧ ಮಳಿಗೆಗೂ ಬೀಗ: ಚಿನ್ನಾಭರಣ ಮಳಿಗೆಗೆ ಬೀಗ ಬಿದ್ದಿರುವ ಬೆನ್ನಲ್ಲೆ ಪುಲಕೇಶಿನಗರ ಕೋಲ್ಸ್ ಪಾರ್ಕ್ ಮುಖ್ಯರಸ್ತೆಯಲ್ಲಿ ‘ರಯ್ಯನ್’ ಸುಗಂಧ ದ್ರವ್ಯ ಮಾರಾಟ ಮಳಿಗೆಗೂ ಬೀಗ ಬಿದ್ದಿದೆ. ದುಬೈ, ಯುಎಇ, ಇಸ್ತಾಂಬುಲ್, ಲೆಬೆನಾನ್, ಇರಾನ್ ಸೇರಿ ಮಧ್ಯಪ್ರಾಚ್ಯ ದೇಶಗಳಿಂದ ದುಬಾರಿ ಮೌಲ್ಯದ ಸುಗಂಧ ದ್ರವ್ಯ ತರಿಸಿ ಕಳೆದ ಮಾರ್ಚ್​ನಲ್ಲಿ ಮಳಿಗೆ ತೆರೆದಿದ್ದ.

ನಿದ್ರಿಸುತ್ತಿದ್ದ ಪೇದೆ ಅಮಾನತು

ಬಂಧಿತ ಐಎಂಎ ಸಂಸ್ಥೆಯ ನಿರ್ದೇಶಕರ ಕಾವಲಿಗಿದ್ದ ಸಶಸ್ತ್ರ ಮೀಸಲು ಪಡೆಯ ಪೇದೆ ಕರ್ತವ್ಯದ ವೇಳೆ ನಿದ್ರಿಸುತ್ತಿದ್ದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಬಂಧಿರಾಗಿರುವ 11 ನಿರ್ದೇಶಕರಲ್ಲಿ ಐವರನ್ನು ಹಲಸೂರು ಠಾಣೆಯಲ್ಲಿ ಇಡಲಾಗಿತ್ತು. ಜೂ.21ರ ರಾತ್ರಿ ಕಾವಲಿಗೆ ಪೇದೆ ಸದ್ದಾಂ ಹುಸೇನ್​ನನ್ನು ನಿಯೋಜಿಸಲಾಗಿತ್ತು. ಆಯುಕ್ತ ಅಲೋಕ್​ಕುಮಾರ್ ಅಂದು ನಗರ ಸಂಚಾರ ನಡೆಸಿದ್ದರು. ಮಧ್ಯರಾತ್ರಿ ಠಾಣೆಗೆ ದಿಢೀರ್ ಭೇಟಿ ನೀಡಿದಾಗ ಸದ್ದಾಂ ಗಾಢ ನಿದ್ರೆಯಲ್ಲಿದ್ದ. ಆಯುಕ್ತರು ಆತನನ್ನು ಎಬ್ಬಿಸಿ ತರಾಟೆಗೆ ತೆಗೆದುಕೊಂಡಿದ್ದರು. ಕರ್ತವ್ಯಲೋಪ ಆರೋಪದ ಮೇಲೆ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಮೂರು ದಿನದಲ್ಲಿ 50 ಕೆಜಿ ಚಿನ್ನಾಭರಣ ಮಾಯ

ಮನ್ಸೂರ್ ಖಾನ್ ಪರಾರಿಯಾಗುವ ಮುನ್ನ 3 ದಿನಗಳಲ್ಲಿ 50 ಕೆಜಿಯಷ್ಟು ಚಿನ್ನವನ್ನು ಕರಗಿಸಿರುವುದು ಮಾತ್ರವಲ್ಲದೆ ಚಿನ್ನದ ಗಟ್ಟಿಗಳನ್ನು ಬೇರೆ ಕಡೆಗೆ ಸಾಗಿಸಿರಬಹುದು ಎಂದು ಎಸ್​ಐಟಿ ಶಂಕೆ ವ್ಯಕ್ತಪಡಿಸಿದೆ. ಜೂ.4ರಂದು ಮನ್ಸೂರ್, ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಎದುರು ವಿಚಾರಣೆ ಎದುರಿಸಿದ್ದ. ಜೂ.5 ರಂದು ಐಎಂಎ ಕಚೇರಿಗೆ ಹೋಗಿ ಎಲ್ಲ ನಿರ್ದೇಶಕರು ಮತ್ತು ಸಿಬ್ಬಂದಿಗೆ 5 ದಿನಗಳ ರಮಜಾನ್ ರಜೆ ಘೊಷಿಸಿದ್ದ. ಈ ನಡುವೆ 50 ಕೆಜಿ ಆಭರಣಗಳನ್ನು ಕರಗಿಸಿ ನಗದಾಗಿ ಪರಿವರ್ತನೆ ಮಾಡಿಕೊಂಡಿದ್ದಾನೆ. ಉಳಿದ ಚಿನ್ನದ ಗಟ್ಟಿಗಳನ್ನು ಬೇರೆಡೆಗೆ ಸಾಗಿಸಿದ್ದಾನೆ. ಹವಾಲಾ ಮಾರ್ಗದಲ್ಲಿ ಹಣವನ್ನು ತಾನಿರುವ ಜಾಗಕ್ಕೆ ತರಿಸಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

20 ಕೆಎಸ್​ಆರ್​ಪಿ ಸಿಬ್ಬಂದಿ ಅಸ್ವಸ್ಥ

ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿನ ಐಎಂಎ ಆಭರಣ ಮಳಿಗೆ ಬಳಿ ಭದ್ರತೆಗಿದ್ದ ಕೆಎಸ್​ಆರ್​ಪಿ ತುಕಡಿಯ 20 ಸಿಬ್ಬಂದಿ ಮಂಗಳವಾರ ಕಲುಷಿತ ಆಹಾರದಿಂದ ಅಸ್ವಸ್ಥಗೊಂಡು ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ್ದು. ಚಿಕಿತ್ಸೆ ಪಡೆದು ಕೆಲವೇ ಗಂಟೆಯಲ್ಲಿ ವಾಪಸ್ ಬಂದಿದ್ದು, 3 ಮಂದಿ ಮಾತ್ರ ಮಧುಮೇಹ ಇದ್ದ ಕಾರಣಕ್ಕೆ ಸಂಜೆಯವರೆಗೂ ವಿಶ್ರಾಂತಿ ಪಡೆದು ಮನೆಗೆ ತೆರಳಿದ್ದಾರೆ. ಕೆಎಸ್​ಆರ್​ಟಿ ತುಕಡಿಯ ಎಲ್ಲ ಸಿಬ್ಬಂದಿಗೂ ನಮ್ಮಿಂದಲೇ ಊಟ ಕೊಡಲಾಗುತ್ತದೆ. ಇದನ್ನು ಸೇವಿಸಿದ ಕೆಲವರು ಮಾತ್ರ ಅಸ್ವಸ್ಥಗೊಂಡಿದ್ದಾರೆ. ಕೆಎಸ್​ಆರ್​ಪಿಯಿಂದ ಕೊಟ್ಟ ಆಹಾರದಿಂದ ತೊಂದರೆ ಆಗಿಲ್ಲ. ಬದಲಿಗೆ ಹೊರಗಡೆ ಸಿಕ್ಕ ತಿಂಡಿ ಸೇವನೆಯಿಂದ ಅಸ್ವಸ್ಥಗೊಂಡಿರುವ ಅನುಮಾನ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೆಎಸ್​ಆರ್​ಪಿ ಎಡಿಜಿಪಿ ಭಾಸ್ಕರ್ ರಾವ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *