ಮನೆ ಸ್ವಚ್ಛಗೊಳಿಸುವುದೇ ಸವಾಲು

ಹಾವೇರಿ: ಕಳೆದೊಂದು ವಾರದಿಂದ ಸತತ ಮಳೆ, ವರದಾ ಹಾಗೂ ತುಂಗಭದ್ರಾ ನದಿಯ ಪ್ರವಾಹದಿಂದ ನಲುಗಿದ್ದ ಜಿಲ್ಲೆಯ ಜನತೆ ನದಿಯಲ್ಲಿ ಪ್ರವಾಹ ಹಾಗೂ ಮಳೆ ಕಮ್ಮಿಯಾಗುತ್ತ ಬರುತ್ತಿರುವುದರಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಪ್ರವಾಹದಲ್ಲಿ ಜಲಾವೃತಗೊಂಡಿದ್ದ ಮನೆಗಳಲ್ಲಿನ ನೀರು ಹೊರಹೋಗುತ್ತಿದೆ. ಆದರೆ, ಮನೆಗಳನ್ನು ಸ್ವಚ್ಛಗೊಳಿಸುವುದೇ ಸಮಸ್ಯೆಯಾಗಿದೆ. ಮನೆಯಲ್ಲಿ ಮೊಣಕಾಲುದ್ದ ನೀರು ನಿಂತು ಹೋಗಿರುವ ನಾಗನೂರ, ವರದಾಹಳ್ಳಿ, ಮೇಲ್ಮುರಿ, ಬೆಳವಿಗಿ, ಕೆಸರಳ್ಳಿ, ಗಳಗನಾಥ, ಕೂಡಲ, ಹರವಿ ಸೇರಿ ಕೆಲ ಗ್ರಾಮಗಳಲ್ಲಿ ವರದೆ ಹಾಗೂ ತುಂಗಭದ್ರೆಯಲ್ಲಿನ ಪ್ರವಾಹ ಅಲ್ಪ ಪ್ರಮಾಣದಲ್ಲಿ ತಣ್ಣಗಾಗಿದ್ದು, ಮನೆಗಳತ್ತ ಸಂತ್ರಸ್ತರು ಮುಖ ಮಾಡಿದ್ದಾರೆ.

ರಾಡಿ ತೆಗೆಯುವುದೇ ಸಮಸ್ಯೆ: ಪ್ರವಾಹದಿಂದ ಮನೆಯೊಳಗೆ ನುಗ್ಗಿರುವ ನೀರಿನ ರಾಡಿಯೊಂದಿಗೆ ಕಟ್ಟಿಗೆ, ಮೇವು, ಹಳೆಯ ಬಟ್ಟೆ, ಪ್ಲಾಸ್ಟಿಕ್​ನಂತಹ ತ್ಯಾಜ್ಯಗಳು ಮನೆಯನ್ನು ಸೇರಿಕೊಂಡಿವೆ. ಗೋಡೆಗಳೆಲ್ಲ ರಾಡಿಯೆದ್ದು ಹೋಗಿವೆ. ನೆಲದಲ್ಲಿ ಒಂದು ಅಡಿಯಷ್ಟು ಕಲ್ಲು, ಮುಳ್ಳು, ಕಸದ ರಾಶಿಗಳಿವೆ. ಇವುಗಳನ್ನೆಲ್ಲ ಹೊರಹಾಕಿ ಮನೆಗಳನ್ನು ಸ್ವಚ್ಛಗೊಳಿಸುವುದೇ ಸಂತ್ರಸ್ತರಿಗೆ ಸವಾಲಾಗಿದೆ.

ಮನೆಗಳು ಕುಸಿಯುವ ಭೀತಿ: ಮನೆಗಳಲ್ಲಿ ವಾರಗಟ್ಟಲೆ ನೀರು ನಿಂತಿದ್ದರಿಂದ ಮನೆಯ ತಳಪಾಯ ಸಡಿಲಗೊಂಡಿದ್ದು, ಮನೆ ಸ್ವಚ್ಛಗೊಳಿಸುವ ಸಮಯದಲ್ಲಿ ಕುಸಿಯುವ ಭೀತಿಯೂ ಆವರಿಸಿದೆ. ಮಣ್ಣಿನ ಗೋಡೆಗಳಿದ್ದ ಮನೆಯವರು ಮನೆ ಸ್ವಚ್ಛತೆಗೂ ಬರದೇ ಪರಿಹಾರ ಕೇಂದ್ರಗಳಲ್ಲಿ, ಸಂಬಂಧಿಕರ ಮನೆಯಲ್ಲಿಯೇ ವಾಸವಾಗಿದ್ದಾರೆ. ಆರ್​ಸಿಸಿ ಮನೆಯಿದ್ದವರು ಧೈರ್ಯ ಮಾಡಿ ಮನೆ ಸ್ವಚ್ಛತೆಗೆ ಮುಂದಾಗಿದ್ದಾರೆ. ಅಲ್ಲಿನ ದೃಶ್ಯಕಂಡು ‘ಹೇಗಪ್ಪಾ ಸ್ವಚ್ಛಗೊಳಿಸೋದು’ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.

ಸತ್ತು ಬಿದ್ದಿವೆ ಜಂತುಹುಳುಗಳು: ನೀರಿನ ರಭಸಕ್ಕೆ ಸತ್ತು ಹೋಗಿರುವ ಹಾವು, ಚೇಳು ಸೇರಿ ವಿವಿಧ ಜಂತುಹುಳುಗಳು, ಇಲಿ, ಹೆಗ್ಗಣಗಳು ಮನೆಯೊಳಗೆ ಸೇರಿವೆ. ಇದರಿಂದ ಕೆಲ ಮನೆಗಳಲ್ಲಿ ಗಬ್ಬು ವಾಸನೆಯೂ ಬರುತ್ತಿದೆ. ಮೂಗಿಗೆ ಬಟ್ಟೆ ಕಟ್ಟಿಕೊಂಡು ಮನೆಗಳನ್ನು ಸ್ವಚ್ಛಗೊಳಿಸುವ ಸ್ಥಿತಿಯೂ ಬಂದಿದೆ.

ಪರಿಹಾರ ಕೇಂದ್ರಗಳಲ್ಲಿಯೇ ವಾಸ: ಪ್ರವಾಹ ದೂರವಾದರೂ ಮನೆಗಳ ಸ್ವಚ್ಛತೆಯೇ ಸವಾಲಾಗಿದ್ದು, ಕನಿಷ್ಠವೆಂದರೂ 2 ದಿನಗಳ ಅವಶ್ಯಕತೆಯಿದೆ. ಹೀಗಾಗಿ ಇನ್ನೆರಡು ದಿನಗಳ ಕಾಲ ಪರಿಹಾರ ಕೇಂದ್ರಗಳಲ್ಲಿಯೇ ವಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂಬುದು ಸಂತ್ರಸ್ತರ ಒತ್ತಾಯವಾಗಿದೆ. ಮಂಗಳವಾರದಿಂದ ಶಾಲಾ-ಕಾಲೇಜ್​ಗಳನ್ನು ಆರಂಭಿಸಲಾಗಿದ್ದು, ಎಲ್ಲ ಪರಿಹಾರ ಕೇಂದ್ರಗಳು ಶಾಲಾ ಕೊಠಡಿಯಲ್ಲಿಯೇ ಇರುವುದರಿಂದ ಮಕ್ಕಳಿಗೆ ಒಂದೆರಡು ಕೊಠಡಿ ಬಿಟ್ಟು ಉಳಿದ ಕಡೆಗಳಲ್ಲಿ ಸಂತ್ರಸ್ತರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *