ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಕುಮಟಾ: ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಬಾಂಬ್ ಸಿಡಿಸಿ ಕಲ್ಲನ್ನು ಒಡೆದಿರುವುದನ್ನು ವಿರೋಧಿಸಿ ಸ್ಥಳೀಯರು ಶುಕ್ರವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.

ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಶುಕ್ರವಾರ ಮಧ್ಯಾಹ್ನ ಅವೈಜ್ಞಾನಿಕವಾಗಿ ಬಾಂಬ್ ಸ್ಪೋಟಿಸಿದ್ದರಿಂದ ಮನೆ, ಶಾಲೆ, ಅಂಗನವಾಡಿಗಳ ಮೇಲೆ ಭಾರಿ ಗಾತ್ರದ ಕಲ್ಲುಗಳ ಸುರಿಮಳೆ ಆಯಿತು. ಸ್ಥಳೀಯರು ಜೀವಭಯದಿಂದ ಮನೆಬಿಟ್ಟು ಓಡಿಹೋದರು. ಕಲ್ಲುಗಳು ಮನೆಯ ಸೂರನ್ನು ಒಡೆದುಕೊಂಡು ಒಳಗೆ ಬಿದ್ದರೂ ಅದೃಷ್ಟವಶಾತ್ ಯಾರಿಗೂ ಜೀವಾಪಾಯವಾಗದೇ ಬಚಾವಾಗಿದ್ದಾರೆ.

ರಾಘವೇಂದ್ರ ಅಪ್ಪಯ್ಯ ಅಂಬಿಗ ಎಂಬುವರ ಮನೆಯ ಕೋಣೆಯೊಳಗೆ ಮಕ್ಕಳು ಮಲಗಿದ್ದ ಹಾಸಿಗೆಯ ಪಕ್ಕವೇ ದೊಡ್ಡ ಕಲ್ಲು ಬಿದ್ದಿದ್ದು ಭಯ ಹುಟ್ಟಿಸಿದೆ. ಶಾಲೆಯ ಹೆಂಚುಗಳನ್ನು ಪುಡಿಗಟ್ಟಿ ಒಳಗೆ ಕಲ್ಲುಗಳು ಬಿದ್ದಿದ್ದು , ಒಂದೊಮ್ಮೆ ಕೊಠಡಿಯಲ್ಲಿ ಮಕ್ಕಳು ಇದ್ದಿದ್ದರೆ ಏನಾಗಬಹುದಿತ್ತು ಎಂದು ಜನ ಪ್ರಶ್ನಿಸಿದ್ದಾರೆ.

ಫಟನೆಯಿಂದ ಕೋಪಗೊಂಡ ಗ್ರಾಮಸ್ಥರು ತಕ್ಷಣ ಸಂಘಟಿತರಾಗಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್​ಬಿ ಕಂಪನಿಯ ಕ್ರಮವನ್ನು ಖಂಡಿಸಿದರು. 2 ತಾಸುಗಳಾದರೂ ಐಆರ್​ಬಿ ಅಥವಾ ಸರ್ಕಾರದ ಯಾವ ಅಧಿಕಾರಿಯೂ ಸ್ಥಳಕ್ಕೆ ಬಾರದೇ ಇರುವುದು ಜನರ ಆಕ್ರೋಶ ಹೆಚ್ಚಲು ಕಾರಣವಾಯಿತು. ನಂತರ ಸ್ಥಳೀಯರು ಹೆದ್ದಾರಿ ಸಂಚಾರ ತಡೆ ನಡೆಸಿ ನ್ಯಾಯಕ್ಕಾಗಿ ಘೊಷಣೆಗಳನ್ನು ಕೂಗಲಾರಂಭಿಸಿದರು. ಸಿಪಿಐ ಸಂತೋಷ ಶೆಟ್ಟಿ, ತಹಸೀಲ್ದಾರ್ ಪಿ.ಕೆ. ದೇಶಪಾಂಡೆ, ಪಿಎಸ್​ಐ ಇಸಿ ಸಂಪತ್ ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದರು. ಬಾಂಬ್ ಸ್ಪೋಟದಿಂದ ನೂರಾರು ಮೀಟರ್ ದೂರಕ್ಕೆ ಸಿಡಿದ ದೊಡ್ಡ ಕಲ್ಲುಗಳು ಉಂಟು ಮಾಡಿದ ಹಾನಿಯನ್ನು ಕಂಡು ದಂಗಾದರು.

ಈ ವೇಳೆ ಮಾತನಾಡಿದ ದಿವಗಿ ಪಂಚಾಯಿತಿ ಮಾಜಿ ಸದಸ್ಯ ಆರ್.ಕೆ. ಅಂಬಿಗ, ಚತುಷ್ಪಥ ಕಾಮಗಾರಿಯಿಂದ ತಂಡ್ರಕುಳಿಯಲ್ಲಿ ವರ್ಷದ ಹಿಂದೆ ಜೀವಗಳ ಹಾನಿಯಾಗಿದೆ. ಪರಿಹಾರ ಕೊಡುತ್ತೇವೆ ಊರುಬಿಡಿ ಎಂದ ಸರ್ಕಾರ ಈವರೆಗೆ ಜನರಿಗೆ ನಯಾಪೈಸೆ ಕೊಟ್ಟಿಲ್ಲ. ದಿಕ್ಕಿಲ್ಲದ ಜನ ಪುನಃ ತಂಡ್ರಕುಳಿಯಲ್ಲೇ ಗೂಡುಕಟ್ಟಿಕೊಂಡು ಬದುಕು ನಡೆಸಿದ್ದಾರೆ. ಸ್ಥಳೀಯರಿಗೆ ಯಾವುದೇ ಮುಂಜಾಗ್ರತೆಯ ಮಾಹಿತಿ ನೀಡದೆ ಅವೈಜ್ಞಾನಿಕವಾಗಿ ಬಾಂಬ್ ಸ್ಪೋಟಿಸಿದ್ದಾರೆ. ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಐಆರ್​ಬಿ ಕಂಪನಿಯದ್ದಾಗಿದೆ’ ಎಂದು ಆರೋಪಿಸಿದರು. ಅಂಬಿಗ ಸಮಾಜದ ಕಾರ್ಯದರ್ಶಿ ಗಣೇಶ ಅಂಬಿಗ ಮಾತನಾಡಿ, ಅವೈಜ್ಞಾನಿಕವಾಗಿ ಬಾಂಬ್ ಸ್ಪೋಟಿಸಿ ಹಾನಿ ಮಾಡಿದ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ಕಾಮಗಾರಿ ಬಂದ್: ಪೊಲೀಸ್ ಅಧಿಕಾರಿಗಳು ಹಾಗೂ ಜನರೊಂದಿಗೆ ರ್ಚಚಿಸಿದ ತಹಸೀಲ್ದಾರ್ ದೇಶಪಾಂಡೆ ಮಾತನಾಡಿ, ಈ ಕೂಡಲೇ ಇಲ್ಲಿನ ರಸ್ತೆ ಕಾಮಗಾರಿಯನ್ನು ಬಂದ್ ಮಾಡಲಾಗುವುದು. ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ದಿನಾಂಕ ನಿಗದಿ ಪಡಿಸಿ ಉಪವಿಭಾಗಾಧಿಕಾರಿಗಳ ಸಮಕ್ಷಮ ಸ್ಥಳೀಯರ ಸಭೆ ನಡೆಸಿ ತೀರ್ವನಕ್ಕೆ ಬರಲಾಗುವುದು ಎಂದರು.

ಗುಡ್ಡ ಕುಸಿತದ ನೆನಪು: ಎರಡು ವರ್ಷಗಳ ಹಿಂದೆ ಹೆದ್ದಾರಿ ಕಾಮಗಾರಿಯ ವೇಳೆ ಗುಡ್ಡ ಕುಸಿದ ಉಂಟಾಗಿ ಅಪಾರ ಹಾನಿ ಸಂಭವಿಸಿತ್ತು. ಈಗ ಕಲ್ಲು ಸ್ಪೋಟಗೊಂಡು ಉಂಟು ಮಾಡಿದ ಹಾನಿ ಸ್ಥಳೀಯರಲ್ಲಿ ಆತಂಕ ಹೆಚ್ಚು ಮಾಡಿತು. ಅಲ್ಲದೆ, ಹಿಂದಿನ ಘಟನೆಯ ಕಹಿ ನೆನಪು ಉಂಟಾಯಿತು.

ಇಲ್ಲಿ ನಾಲ್ಕು ವರ್ಷವಾದರೂ ಚತುಷ್ಪಥ ಕಾಮಗಾರಿ ಮುಗಿಯುತ್ತಲೇ ಇಲ್ಲ. ಮನೆಯಲ್ಲಿ ಮಲಗಿರುವ ಸಮಯದಲ್ಲಿ ಯಾರಿಗೂ ಮಾಹಿತಿ ಕೊಡದೇ ಬಾಂಬ್ ಸ್ಪೋಟಿಸಿದ್ದಾರೆ. ಜನ ಕಂಗಾಲಾಗಿದ್ದಾರೆ. ಇಲ್ಲಿ ಘಟನೆ ನಡೆದು ಎರಡು ತಾಸಾದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾರೂ ನೋಡಲು ಬಂದಿಲ್ಲ. | ಸವಿತಾ ಅಂಬಿಗ ಸ್ಥಳೀಯ ಮಹಿಳೆ