ಕಳಸ: ತಾಲೂಕಿನಾದ್ಯಂತ ಮಂಗಳವಾರ ಬಿರುಸಿನ ಮಳೆಯಾಗಿದ್ದು, ಸೋಮವಾರ ರಾತ್ರಿ ಗಾಳಿ ಮಳೆಗೆ ಮರಸಣಿಗೆ ಗ್ರಾಮದ ಗಾಂಧಿನಗರದಲ್ಲಿ ಮನೆ ಮೇಲೆ ಮರ ಬಿದ್ದು ಮನೆಯ ಪ್ರೇಮಾ ಎಂಬುವರಿಗೆ ಗಾಯವಾಗಿದೆ.
ಪ್ರೇಮಾ ಮತ್ತು ಕುಟುಂಬಸ್ಥರು ನಿದ್ದೆ ಮಾಡುತ್ತಿದ್ದಾಗ ಮಧ್ಯರಾತ್ರಿ ಮರ ಮನೆ ಮೇಲೆ ಮರ ಬಿದ್ದಿದೆ. ಮರ ಬಿದ್ದ ಶಬ್ದಕ್ಕೆ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಆದರೂ ಮರದ ಕೊಂಬೆ ಪ್ರೇಮಾ ಅವರ ತಲೆಗೆ ತಾಗಿ ಗಾಯವಾಗಿದೆ. ಮರ ಬಿದ್ದ ಕೂಡಲೇ ಸಹಾಯಕ್ಕಾಗಿ ಮರಸಣಿಗೆ ಗ್ರಾಪಂ ಸದಸ್ಯ ವಿಶ್ವನಾಥ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೆ ಸದಸ್ಯರಾದ ವಿಶ್ವನಾಥ ಮತ್ತು ಗುಲಾಬಿ ಸ್ಥಳಕ್ಕೆ ಬಂದು ತೊಂದರೆಗೆ ಸಹಾಯ ಮಾಡಿದರು. ಗಾಯಾಳುವನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯಲ್ಲಿದ್ದ ಎಲ್ಲ ವಸ್ತುಗಳೂ ನಾಶವಾಗಿವೆ.
ಮಂಗಳವಾರ ಬೆಳಗ್ಗೆ ತಾಲೂಕು ಅಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸರು ಸ್ಥಳ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳೀಯರು ಮರ ತೆರವು ಕಾರ್ಯಾಚರಣೆಯಲ್ಲಿ ನೆರವಾಗಿದರು. ಶಾಸಕಿ ನಯನಾ ಮೋಟಮ್ಮ ಅವರು ಸಂತ್ರಸ್ತ ಕುಟುಂಬಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.