ಕಡೂರು: ರಾಜ್ಯ ಸರ್ಕಾರದ ಘರ್ ಘರ್ ನಳಾಯಿ ಯೋಜನೆಗೆ ಜಿಲ್ಲೆಯ ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲೂಕುಗಳು ಆಯ್ಕೆಯಾಗಿದ್ದು ಮನೆ ಮನೆಗೂ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಘರ್ ಘರ್ ನಳಾಯಿ ಯೋಜನೆಯಲ್ಲಿ 1,089 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಹರ್ ಘರ್ ತಿರಂಗಾ ಅಭಿಯಾನದಿಂದ ದೇಶದ ಪ್ರತಿಯೊಬ್ಬರೂ ಸ್ವಾತಂತ್ರ್ಯ ಅಮೃತಮಹೋತ್ಸವದಲ್ಲಿ ಭಾಗಿಯಾದಂತಾಗಿದೆ. ಈ ಮೂಲಕ ಇತರ ರಾಷ್ಟ್ರಗಳಿಗೂ ಮಾದರಿಯಾಗಿದೆ ಸಂತಸ ವ್ಯಕ್ತಪಡಿಸಿದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಜೆ.ಉಮೇಶ್ ಮಾತನಾಡಿ, ನವಭಾರತದ ನಿರ್ಮಾಣ ಯುವಪೀಳಿಗೆಯಿಂದ ಸಾಕಾರಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತಿವೆ ಎಂದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು. ಉಪಾಧ್ಯಕ್ಷೆ ವಿಜಯಾ ಚಿನ್ನರಾಜು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ರೇವಣಯ್ಯ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಆರ್.ಸುರೇಶ್, ಇಒ ಡಾ. ಟಿ.ಎಂ.ದೇವರಾಜ್ ನಾಯ್್ಕ ಮುಖ್ಯಾಧಿಕಾರಿ ರುದ್ರೇಶ್, ಜಿಪಂ ಮಾಜಿ ಸದಸ್ಯೆ ಕಾವೇರಿ ಲಕ್ಕಪ್ಪ ಇತರರಿದ್ದರು.