ಮನೆ ಬಿಚ್ಚಿಸಿ ಪಡುತ್ತಿದ್ದೇವೆ ಪಶ್ಚಾತ್ತಾಪ

blank

ಹುಬ್ಬಳ್ಳಿ: ‘ಸೋರುವ ಮನೆಯಲ್ಲಿ ನೆಮ್ಮದಿಯಿಂದ ಇದ್ದೆವು. ಆರ್​ಸಿಸಿ ಮನೆ ಕಟ್ಟಿಸಿಕೊಡುತ್ತಾರೆಂದು ಹಳೇ ಮನೆ ಬಿಚ್ಚಿಸಿ ಈಗ ಪಶ್ಚಾತ್ತಾಪ ಪಡುತ್ತಿದ್ದೇವೆ…’

ನಗರದ ಗಿರಣಿಚಾಳ ಕೊಳಚೆ ಪ್ರದೇಶದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯ ಫಲಾನುಭವಿಗಳ ಅಳಲು ಇದು. ಇಲ್ಲಿ 2018ರ ಡಿಸೆಂಬರ್​ನಲ್ಲಿ ಬಡವರಿಗಾಗಿ 63 ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಇಲ್ಲಿಯವರೆಗೂ ಗುತ್ತಿಗೆದಾರರು ಒಂದು ಮನೆ ಪೂರ್ಣಗೊಳಿಸುವುದಿರಲಿ, ಯಾವ ಮನೆಯೂ ಸ್ಲ್ಯಾಬ್ ಹಂತಕ್ಕೂ ಬಂದಿಲ್ಲ. ಮೇಲಾಗಿ ಕಳೆದ 3 ತಿಂಗಳಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.

ಹಳೇ ಮನೆ ನೆಲಸಮ ಗೊಳಿಸಲು 20 ಸಾವಿರ ರೂ. ಖರ್ಚು ಮಾಡಿದ್ದೇವೆ. ಬಾಡಿಗೆ ಮನೆಯಲ್ಲಿ ಉಳಿಯಲು 20-30 ಸಾವಿರ ರೂ. ಮುಂಗಡ ನೀಡಿದ್ದೇವೆ. ಮೇಲಾಗಿ ಕಳೆದ 1 ವರ್ಷದಿಂದ ಬಾಡಿಗೆ ನೀಡುತ್ತಿದ್ದೇವೆ. ಎಲ್ಲ ಲೆಕ್ಕ ತೆಗೆದರೆ ನಮ್ಮ ಹಣದಲ್ಲಿಯೇ ನಾವು ಸ್ವಂತ ಮನೆ ಕಟ್ಟಿಕೊಳ್ಳಬಹುದಿತ್ತು. ಇವರ ಉಸಾಬರಿನೇ ಬೇಡವಾಗಿತ್ತು ಎಂದು ಫಲಾನುಭವಿಗಳು, ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬಾಡಿಗೆ ಕಟ್ಟಿ ಹೈರಾಣ

ಸುಸಜ್ಜಿತ ಆರ್​ಸಿಸಿ ಮನೆಗಾಗಿ ಕೊಳಗೇರಿ ನಿವಾಸಿಗಳು ಮೂಲ ಮನೆ (ಜೋಪಡಿ, ಕಚ್ಚಾ ಮನೆ)ಯನ್ನು ಕೆಡವಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೆಲವರು ಪ್ರತಿ ತಿಂಗಳು 3ರಿಂದ 4 ಸಾವಿರ ರೂ. ಬಾಡಿಗೆ ಕಟ್ಟುತ್ತಿದ್ದಾರೆ. ಇದ್ದಂತಹ ಕಚ್ಚಾಮನೆಯಲ್ಲಿ ಹೇಗೊ ಜೀವನ ನಡೆಸುತ್ತಿದ್ದ ಕೊಳಗೇರಿ ನಿವಾಸಿಗಳು ಮನೆ ಬಾಡಿಗೆ ಕಟ್ಟಿ ಹೈರಾಣಾಗಿದ್ದಾರೆ.

ಗರಿಷ್ಠ 330 ಚದರ ಅಡಿ ವಿಸ್ತ್ರೀರ್ಣದಲ್ಲಿ ಆರ್​ಸಿಸಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಫಲಾನುಭವಿ ವಂತಿಗೆ 58 ಸಾವಿರ ರೂ. (ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 48 ಸಾವಿರ ರೂ.). ಪ್ರತಿ ಮನೆಗೆ ರಾಜ್ಯ ಸರ್ಕಾರ 2 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರ 1.5 ಲಕ್ಷ ರೂ. ನೀಡಿದೆ. ಅಂದರೆ, ಫಲಾನುಭವಿ ಕೇವಲ 48-58 ಸಾವಿರ ರೂ. ತುಂಬಿದರೆ ಸುಮಾರು 4 ಲಕ್ಷ ರೂ. ವೆಚ್ಚದ ಮನೆಯ ಮಾಲೀಕನಾಗುತ್ತಾನೆ. 6 ತಿಂಗಳೊಳಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ರಾಜಕಾರಣಿಗಳು, ಅಧಿಕಾರಿಗಳು ಹೇಳಿದ್ದರು.

ಹುಬ್ಬಳ್ಳಿ ನಗರದಲ್ಲಿ 526 ಮನೆಗಳ ನಿರ್ಮಾಣ ಗುತ್ತಿಗೆಯನ್ನು ಬೆಂಗಳೂರಿನ ಗೌರಿ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ ಪಡೆದಿದೆ. ಇದರಲ್ಲಿ ಗಿರಣಿಚಾಳ ಕೊಳಚೆ ಪ್ರದೇಶ ಸಹ ಸೇರಿದೆ. ಕೊಳಗೇರಿ ಪ್ರದೇಶ ಅಭಿವೃದ್ಧಿ ಮಂಡಳಿ (ಹುಬ್ಬಳ್ಳಿ) ಅಧಿಕಾರಿಗಳು, ಗುತ್ತಿಗೆದಾರರು ಹೇಳುವ ಸಬೂಬು ಕೇಳಿಕೊಂಡು ಇದ್ದಾರೆ. ವಿಳಂಬಕ್ಕೆ ಕಾರಣ ಕೇಳಿ ಒಂದು ನೋಟಿಸ್ ನೀಡಿದ ಉದಾಹರಣೆಯೂ ಇಲ್ಲ. ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ತಿಂಗಳಿಗೆ 3 ಬಾರಿ ಮೀಟಿಂಗ್ ಮಾಡುವ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಒಮ್ಮೆಯೂ ಇವರ ಗೋಳು ಕೇಳಿಲ್ಲ. ಫಲಾನುಭವಿಗಳು ಹೋಗಿ ಇವರನ್ನು ಹಲವು ಬಾರಿ ಭೇಟಿ ಮಾಡಿದ್ದಾರೆ. ಮನವಿ ಸಹ ನೀಡಿದ್ದಾರೆ. ಕಳಪೆ ಕಾಮಗಾರಿಯ ಬಗ್ಗೆ ಫಲಾನುಭವಿಗಳು ದೂರಿದ್ದರೂ ಪರಿಶೀಲನೆ ನಡೆಸಿಲ್ಲ. ಬಡವರು, ಅದರಲ್ಲೂ ಕೊಳಚೆ ಪ್ರದೇಶದ ಬಡವರ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಇಲ್ಲಿ ಸ್ಪಷ್ಟವಾಗುತ್ತಿದೆ.

ಒಟ್ಟಾರೆ ಗುತ್ತಿಗೆದಾರರು, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಸೇರಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹೆಸರು ಕೆಡಿಸಿದ್ದಾರೆ.

ಕಾಮಗಾರಿ ಸ್ಥಗಿತಗೊಳಿಸಿರುವ ಬಗ್ಗೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೇವೆ. ತಕ್ಷಣ ಕೆಲಸ ಆರಂಭಿಸಲು ಹೇಳಿದ್ದೇವೆ.

| ಸುರೇಶ ಹಿರೇಮಠ

ಎಇಇ, ಕೊಳಗೇರಿ ಪ್ರದೇಶ ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ

ಎಲ್ಲರೂ ಒಟ್ಟಿಗೆ ಮನೆ ಖಾಲಿ ಮಾಡಿಕೊಡಿ. 6 ತಿಂಗಳಲ್ಲಿ ಮನೆ ಕಟ್ಟಿಸಿಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರು. ಈಗ ನೋಡಿದರೆ ನವಂಬರ್​ನಿಂದ ಕೆಲಸ ನಿಂತಿದೆ. ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ದಚಿವ ಜಗದೀಶ ಶೆಟ್ಟರ್ ಮನೆಗೆ ಅಡ್ಡಾಡಿದ್ದೇವೆ. ಏನೂ ಪ್ರಯೋಜನವಾಗಿಲ್ಲ.

| ವೆಂಕಟೇಶ ಬಳ್ಳಾರಿ

ಸ್ಥಳೀಯ ನಿವಾಸಿ

ನಾವು ದುಡಿಯುವ ಮಂದಿ. ಬೆಳಗ್ಗೆ ದುಡಿಯಲು ಹೋದ್ರೆ ರಾತ್ರಿ ಮನೆಗೆ ವಾಪಸ್ ಬರುತ್ತೇವೆ. ಕೆಲಸಕ್ಕೆ ಲೇಬರ್ ಬಂದಿದ್ದಾರೆಯೇ ಎಂದು ಪ್ರತಿ ದಿನ ಕೇಳುವುದೇ ಆಗಿದೆ. ಯಾಕಾದರೂ ಮನೆ ಬಿಚ್ಚಿಸಿದ್ದೇವೆಯೋ ಎಂದು ನಾವೇ ಹಣೆ ಜಜ್ಜಿಕೊಳ್ಳಬೇಕಾಗಿದೆ. ಮುಂದೆ ಯಾರೂ ಈ ಯೋಜನೆಯ ಫಲಾನುಭವಿಗಳಾಗಬೇಡಿ ಎಂದು ಹೇಳುವ ಪರಿಸ್ಥಿತಿ ಬಂದಿದೆ.

| ಮಂಜುನಾಥ ಬಳ್ಳಾರಿ

ಸ್ಥಳೀಯ ನಿವಾಸಿ

ವಠಾರದಲ್ಲಿ ಕಳೆದ 1 ವರ್ಷದಲ್ಲಿ 6-7 ಜನ ನಿಧನರಾದರು. ಬಾಡಿಗೆ ಮನೆಯಲ್ಲಿ ಶವ ಇಡಲು ಮನೆಯ ಮಾಲೀಕರು ಅವಕಾಶ ಕೊಡಲಿಲ್ಲ. ಫಲಾನುಭವಿಗಳು ಅರ್ಧ ನಿರ್ವಣವಾಗಿರುವ ಹಳೇ ಮನೆಯ ಮುಂದೆ ಶವ ಇಟ್ಟು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

| ಗುರುನಾಥ ಮದರಿ

ಸ್ಥಳೀಯ ನಿವಾಸಿ



Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…