ಮನೆಲ ಕ್ರಿಸ್ತರಾಜ ದೇವಾಲಯದಗ್ರೊಟ್ಟೊಗೆ ಕಿಡಿಗೇಡಿಗಳಿಂದ ಹಾನಿ

ವಿಟ್ಲ: ಪುಣಚ ತೋರಣಕಟ್ಟೆ ರಸ್ತೆಯಲ್ಲಿರುವ ಮನೆಲ ಕ್ರಿಸ್ತರಾಜ ದೇವಾಲಯಕ್ಕೆ ಸೇರಿದ ಗ್ರೊಟ್ಟೊಗೆ ಶನಿವಾರ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ಹಾನಿಗೊಳಿಸಿದ್ದಾರೆ.
ಮುಂಜಾನೆ 5.45ರ ಸುಮಾರಿಗೆ ಮಹಿಳೆಯೊಬ್ಬರು ಪೂಜೆ ಸಲ್ಲಿಸಲು ಬಂದಾಗ ಯಾವುದೇ ಹಾನಿಯಾಗಿರಲಿಲ್ಲ. ಆದರೆ 10.30ರ ವೇಳೆಗೆ ಹಾನಿಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಟ್ಲ ಪೊಲೀಸ್ ಉಪನಿರೀಕ್ಷಕ ಯಲ್ಲಪ್ಪ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲ್ಲು ಎಸೆತದಿಂದ ಗ್ರೊಟ್ಟೊದ ಗಾಜು ಹಾನಿಯಾಗಿದ್ದು, ಸೂಕ್ತ ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧರ್ಮಗುರು ಪ್ರಕಾಶ್ ಡಿಸೋಜ ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಘಟನೆ ಮೇಲೆ ಶಂಕೆ: ಕೆಲವು ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳು ಚರ್ಚ್‌ನಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಹಬ್ಬಿಸಿದ್ದರು. ಇದೇ ತಂಡ ಒಂದು ಹಂತ ಮುಂದುವರಿದು ಈ ಕೃತ್ಯ ನಡೆಸಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ.