ಮನೆತನಕ್ಕೆ ಮಹಿಳೆಯಿಂದ ಹೆಚ್ಚು ಗೌರವ

ಗೋಕಾಕ: ಮಹಿಳೆಯರು ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿ ಅನುಸರಿಸಬೇಕು. ಮನೆತನದ ಗೌರವ ಹೆಚ್ಚಲು ಮಹಿಳೆಯರ ಪಾತ್ರ ಮುಖ್ಯ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರ‌್ದಾರೆ.

ನಗರದ ಶೂನ್ಯ ಸಂಪಾದನಾ ಮಠದಲ್ಲಿ ಭಾನುವಾರ ಲಿಂ. ಶ್ರೀಬಸವ ಮಹಾಸ್ವಾಮಿಗಳ 14ನೇ ಪುಣ್ಯಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಮತ್ತು ಮಹಿಳಾ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ಮಹಿಳೆಯರು ಎಲ್ಲ ರಂಗಗಳಲ್ಲಿ ಸಾಧನೆಗೈದಿದ್ದಾರೆ. ಮಹಿಳೆ ವೀರಳು, ಶೂರಳು, ಧೈರ್ಯವಂತಳಾಗಿದ್ದಾಳೆ. ಶರಣ ಸಂಸ್ಕೃತಿ ಬಹಳ ಮಹತ್ವದ್ದಾಗಿದೆ. ನಿತ್ಯ ಮುಕ್ತಿ ಪಡೆಯುವವನೇ ಶರಣ. ಶರಣ ಸ್ಥಲಕ್ಕೆ ಭಕ್ತನೇ ಆಧಾರ. ಮನುಷ್ಯನ ಜೀವನ ಶುದ್ಧಗೊಳಿಸಲು ಶರಣ ಸಂಸ್ಕೃತಿ ಮುಖ್ಯ ಎಂದರು.

ಬೆಂಗಳೂರಿನ ಸಣ್ಣ ಮಕ್ಕಳ ಹೃದಯ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಹೆಣ್ಣು ಪ್ರಕೃತಿಯಾಗಿದ್ದಾಳೆ. ಉತ್ಕೃಷ್ಠ ಸಮಾಜದಲ್ಲಿ ತಾಯಿಯೇ ಸೇವೆ ಪ್ರಮುಖವಾಗಿದೆ. ಭ್ರೂಣ ಹತ್ಯೆ ತಡೆಯಲು ಇಂದು ಮಹಿಳೆಯರು ಮುಂದಾಗಬೇಕು. ಸಮಾಜದಲ್ಲಿ ಭ್ರೂಣ ಹತ್ಯೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಹಿಳೆಯರು ಮಾಡಬೇಕು ಎಂದು ತಿಳಿಸಿದರು.

ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ಹಾಗೂ ಘಟಪ್ರಭಾ ಗುಬ್ಬಲಗುಡ್ಡದ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವಿವಿಧ ರಂಗಗಳಲ್ಲಿ ಸಾಧನೆಗೈದ ಶಕುಂತಲಾ ದಂಡಗಿ, ಡಾ.ಅರುಣಾ ತುಪ್ಪದ, ಭಾರತಿ ಮದಬಾವಿ, ಚಂದ್ರಕಲಾ ಹೆಗಡೆ, ರೇಖಾ ಕ್ಯಾಸ್ತಿ, ಆರತಿ ಗುಗ್ಗವಾಡ, ಈರವ್ವ ಹಿರೇಮಠ, ಮಂಜುಳಾ ಹಿರೇಮಠ, ಜಯಶ್ರೀ ಗುರ್ಲಹೊಸೂರ ಅವರನ್ನು ಸತ್ಕರಿಸಲಾಯಿತು.12ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಮೀನಾಕ್ಷಿ ಎಸ್.ಬಾನಿ, ಶಿರೀಷಾ ಎ., ಡಾ. ಸೀಮಾ ಮಾಸೂರಕರ, ಸುನಂದಾ ಕರದೇಸಾಯಿ, ರಾಜೇಶ್ವರಿ ಈರನಟ್ಟಿ, ರೂಪಾ ಮುನವಳ್ಳಿ, ರಾಜೇಶ್ವರಿ ಬೆಟ್ಟದಗೌಡರ, ಮಲ್ಲಿಕಾರ್ಜುನ ಕಲ್ಲೊಳ್ಳಿ ಉಪಸ್ಥಿತರಿದ್ದರು. ಅಮ್ಮಾಜಿ ನೃತ್ಯ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಆರ್.ಎಲ್.ಮಿರ್ಜಿ ಸ್ವಾಗತಿಸಿದರು. ಎಸ್.ಕೆ.ಮಠದ ನಿರೂಪಿಸಿದರು. ಅಡಿವೇಶ ಗವಿಮಠ ವಂದಿಸಿದರು.