ಮನೆಗಳ ಬೀಗ ಮುರಿದು 94 ತೊಲೆ ಬಂಗಾರ, ಹಣ ಲೂಟಿ

ಸಿಂದಗಿ: ಬೇಸಿಗೆಗೆ ಬೇಸತ್ತು ಸುಖ ನಿದ್ರೆಗಾಗಿ ಮನೆಗಳಿಗೆ ಬೀಗ ಜಡಿದು ಮಾಳಿಗೆ ಏರಿದ ಮಾಲೀಕರಿಗೆ ಖತರ್ನಾಕ್ ಕಳ್ಳರು ರಾತ್ರಿ ಅವರ ಮನೆಗಳ ಬೀಗ ಮುರಿದು ಬಂಗಾರ, ಬೆಳ್ಳಿ ಹಾಗೂ ನಗದು ಲೂಟಿ ಮಾಡಿ ಬಿಗ್ ಶಾಕ್ ನೀಡಿದ್ದಾರೆ.

ತಾಲೂಕಿನ ಗೋಲಗೇರಿಯಲ್ಲಿ ಸೋಮವಾರ ರಾತ್ರಿ ಬೀಸಿದ ಬಿರುಗಾಳಿಗೆ ಕಳ್ಳತನ ಮಾಡಲು ಹೋದ ಮನೆಯಲ್ಲಿ ಎಚ್ಚರಗೊಂಡವರ ಮತ್ತು ತಡೆಯಲು ಬಂದವರ ಕಣ್ಣಿಗೆರೆಚಲು ಅಂದಾಜು 2 ಸೊಲಿಗೆಯಷ್ಟು ಖಾರದಪುಡಿ ಹೊತ್ತು ತಂದು ಇನ್ನೊಂದು ಮನೆಯಲ್ಲಿಟ್ಟು ಸಿಕ್ಕಿದ್ದನ್ನು ದೋಚಿ ಪರಾರಿಯಾಗಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಇರಲಿಲ್ಲ. ಇದನ್ನೇ ನೆಪ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿ ಒಟ್ಟು 12 ಮನೆಗಳ ಬೀಗ ಮುರಿದಿದ್ದಾರೆ.

ಗ್ರಾಮದ ಬಸ್ ನಿಲ್ದಾಣ ಬಳಿಯ ಗಾಂಧಿ ನಗರದಲ್ಲಿನ 8 ಮನೆಗಳು ಹಾಗೂ ಉಳಿದೆಡೆ 4 ಮನೆಗಳಿಗೆ ಕನ್ನ ಹಾಕಿದ್ದಾರೆ. ಕಾಂಗ್ರೆಸ್ ಮುಖಂಡ ಎಂ.ಎಸ್. ರದ್ದೇವಾಡಗಿ ಮನೆಯಲ್ಲಿ ಅಂದಾಜು 33 ತೊಲೆ ಬಂಗಾರ, ಅರ್ಧ ಕೆಜಿ ಬೆಳ್ಳಿ, ಅಬ್ಬಾಸಲಿ ಅರಳಗುಂಡಗಿ ಮನೆಯಲ್ಲಿ 1.5 ತೊಲೆ ಬಂಗಾರ ಹಾಗೂ 10 ಸಾವಿರ ರೂ. ನಗದು, ಶರಣಬಸು ಆರ್. ಬಿರಾದಾರ ಮನೆಯಲ್ಲಿ ಅಂದಾಜು 51 ತೊಲೆಗೂ ಹೆಚ್ಚು ಬಂಗಾರ ಹಾಗೂ 65 ತೊಲೆ ಬೆಳ್ಳಿ ಮತ್ತು 15 ಲಕ್ಷ ರೂ. ನಗದು, ಕರಿಬಸಪ್ಪ ಶಿಂಪಿ ಮನೆಯಲ್ಲಿ 3 ತೊಲೆ ಹಾಗೂ 75 ಸಾವಿರ ರೂ. ನಗದು, ಶಾಂತೇಶ ಜನಗೊಂಡ ಮನೆಯಲ್ಲಿ 1.5 ಗ್ರಾಂ ಬಂಗಾರ ಹಾಗೂ 11 ಸಾವಿರ ನಗದು, ದೇವಿಂದ್ರ ಬಿರಾದಾರ ಅವರಿಗೆ ಸೇರಿದ 1 ತೊಲೆ ಬಂಗಾರ, ಹುಬ್ಬಣ್ಣ ಕೇಸಟ್ಟಿ 80 ಸಾವಿರ ರೂ. ನಗದು, ಬಸವರಾಜ ಮಣ್ಣೂರ ಮನೆಯಲ್ಲಿ 3 ತೊಲೆ ಬಂಗಾರ 12 ಸಾವಿರ ರೂ., ಪ್ರವೀಣ ಕಿಶೋರ ಮನೆಯಲ್ಲಿ 8500 ರೂ., ಕೆ. ತಾತಯ್ಯ ಅವರಿಗೆ ಸೇರಿದ 4900 ನಗದು ಸೇರಿ ಒಟ್ಟು 94 ತೊಲೆ ಬಂಗಾರ ಮತ್ತು ಅರ್ಧ ಕೆಜಿ ಬೆಳ್ಳಿ ಹಾಗೂ ಅಂದಾಜು 17 ಲಕ್ಷ ರೂಗಳನ್ನು ಲೂಟಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಬಿ.ಎಸ್. ನ್ಯಾಮಗೌಡ, ಸಿಪಿಐ ಮಹಾಂತೇಶ ದಾಮಣ್ಣವರ, ಕಲಕೇರಿ ಠಾಣಾಧಿಕಾರಿ ಎನ್.ಆರ್. ಕಿಲಾರೆ, ಬೆರಳಚ್ಚು ತಂಡ ಹಾಗೂ ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲಿಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.