ಮನೆಗಳ ಕಾಮಗಾರಿ ಕಳಪೆ ಆರೋಪ

ಹುಬ್ಬಳ್ಳಿ :ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಚಾಮುಂಡೇಶ್ವರಿ ನಗರ, ಗಿರಣಿ ಚಾಳ ಹಾಗೂ ಲೋಕಪ್ಪನ ಹಕ್ಕಲದಲ್ಲಿ ನಿರ್ವಿುಸುತ್ತಿರುವ ಮನೆಗಳ ಕಾಮಗಾರಿ ಕಳಪೆಯಾಗಿದೆ ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತರಾಟೆಗೆ ತೆಗೆದುಕೊಂಡರು.

ಚಾಮುಂಡೇಶ್ವರಿ ನಗರದಲ್ಲಿ ನಿರ್ವಿುಸುತ್ತಿರುವ ಮನೆಗಳ ಕಾಮಗಾರಿಯನ್ನು ಅವರು ಸೋಮವಾರ ಪರಿಶೀಲಿಸಿದರು. ಆ ವೇಳೆ ಸ್ಥಳೀಯರು ಸಮಸ್ಯೆಗಳನ್ನು ಹೇಳಿಕೊಂಡರು. ಫ್ಲೋರ್ ಸರಿಯಾಗಿ ಹಾಕಿಲ್ಲ. ನಿರ್ಮಾಣ ಹಂತದಲ್ಲೇ ಸೋರುತ್ತಿವೆ. ಎರಡು ವರ್ಷದಿಂದ ಬಾಡಿಗೆ ಮನೆಯಲ್ಲೇ ವಾಸವಾಗಿದ್ದು, ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಈ ಬಗ್ಗೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶೆಟ್ಟರ್, ಆಗಸ್ಟ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟದ ಮನೆಗಳನ್ನು ನಿರ್ವಿುಸಿಕೊಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಪಾಲಿಕೆ ಮಾಜಿ ಸದಸ್ಯ ಸಿದ್ದು ಮೊಗಲಿಶೆಟ್ಟರ್, ರವಿ ನಾಯಕ, ಕಿರಣ ಉಪ್ಪಾರ, ಲೋಕೋಪಯೋಗಿ ಇಲಾಖೆ ಇಂಜಿನಿಯರ್​ಗಳು, ಗುತ್ತಿಗೆದಾರರು, ಇತರರು ಇದ್ದರು.

525 ಮನೆಗಳಿಗೆ ಅನುಮತಿ:ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 525 ಮನೆಗಳ ನಿರ್ವಣಕ್ಕೆ ಅನುಮತಿ ದೊರೆತಿದೆ. ಚಾಮುಂಡೇಶ್ವರಿ ನಗರದಲ್ಲಿ 80, ಲೋಕಪ್ಪನ ಹಕ್ಕಲದಲ್ಲಿ 60, ಗಿರಣಿ ಚಾಳದಲ್ಲಿ 100 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಬೆಂಗಳೂರಿನ ಗೌರಿ ಇನ್​ಫ್ರಾಸ್ಟ್ರಕ್ಚರ್​ಗೆ ಗುತ್ತಿಗೆ ನೀಡಲಾಗಿದೆ. ನಿಯಮದ ಪ್ರಕಾರ 18 ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ನಿರ್ವಿುಸಲಾಗುತ್ತಿದೆ. ಎಸ್​ಸಿಎಸ್​ಟಿ ಸದಸ್ಯರು 48 ಸಾವಿರ ರೂ. ಹಾಗೂ ಸಾಮಾನ್ಯ ವರ್ಗದವರು 58 ಸಾವಿರ ರೂ. ಹಣ ಪಾವತಿಸಿ, ಜಾಗ ಕೊಟ್ಟರೆ ಅಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರವೇ ಮನೆ ನಿರ್ವಿುಸಿಕೊಡುವ ಯೋಜನೆ ಇದಾಗಿದೆ ಎಂದರು.

ಅಧಿಕಾರಿಗಳ ನಿರ್ಲಕ್ಷ್ಯಂದ ಮಳೆ ಅನಾಹುತ:ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಂದ ಹುಬ್ಬಳ್ಳಿಯಲ್ಲಿ ಮಳೆ ಅನಾಹುತವಾಗಿದೆ. ಮುನ್ನೆಚ್ಚರಿಕೆ ವಹಿಸದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಸಿಆರ್​ಎಫ್ ರಸ್ತೆಗಳಲ್ಲಿ ಸಮಸ್ಯೆ ಇಲ್ಲ. ಬಿಆರ್​ಟಿಎಸ್​ನ ಕೆಲವೆಡೆ ಸಮಸ್ಯೆಯಾಗಿದೆ. ಅವುಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಶೆಟ್ಟರ್ ತಿಳಿಸಿದರು.

Leave a Reply

Your email address will not be published. Required fields are marked *