ಹೊನ್ನಾವರ: ಧಾರಾಕಾರ ಮಳೆಯಿಂದ ತಾಲೂಕಿನ ಮಂಕಿಯ ಬಣಸಾಲೆ, ಗುಂದ, ಚಿಟ್ಟಿಹಿತ್ಲ, ಗುಳದಕೇರಿ, ಹಳೇಮಠ ಭಾಗದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ಮಂಕಿಯ ಗುಳ್ಳದಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. ನೀರು ನುಗ್ಗಿರುವ ಮನೆಗಳ 45 ಜನರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮಂಕಿ ಸುತ್ತಮುತ್ತಲ ಊರುಗಳಲ್ಲಿ ಹಿಂದೆಂದೂ ಈ ಪ್ರಮಾಣದಲ್ಲಿ ನೆರೆ ಕಾಣಿಸಿಕೊಂಡಿರಲಿಲ್ಲ.
ಪರಿಹಾರ ಕೇಂದ್ರಗಳಿಗೆ ಜನರನ್ನು ಸಾಗಿಸಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಸಹಕರಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಮಳೆಯ ನೀರು ಸರಾಗವಾಗಿ ಹರಿಯಲು ಸೂಕ್ತ ಕಾಲುವೆ ನಿರ್ವಿುಸದಿರುವುದು, ಹೆದ್ದಾರಿಯ ಎರಡೂ ಬದಿಯ ಗದ್ದೆಗಳಲ್ಲಿ ಮಣ್ಣು ತುಂಬಿ ಕಟ್ಟಡಗಳನ್ನು ನಿರ್ವಿುಸಿರುವುದು ಮತ್ತು ಹಳ್ಳಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿದು ಹೋಗದಿರುವುದರಿಂದ ದಿಢೀರ್ ಪ್ರವಾಹ ಉಂಟಾಗಿದೆ. ನೀರಿನ ರಭಸಕ್ಕೆ ರಸ್ತೆಯ ಬದಿಯಲ್ಲಿ ಸುರಿದಿದ್ದ ನೂರಾರು ಲೋಡ್ ಮಣ್ಣು ಕೊಚ್ಚಿಹೋಗಿ ಗದ್ದೆಗಳಲ್ಲಿ ಶೇಖರಣೆಯಾಗಿದೆ. ನೀರು ನುಗ್ಗಿದ ಮನೆಗಳಲ್ಲೂ ಕೆಸರು ತುಂಬಿಕೊಂಡಿದೆ.
ಸ್ಥಳಕ್ಕೆ ತಹಸೀಲ್ದಾರ್ ವಿವೇಕ ಶೇಣ್ವಿ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂಜೆ ವೇಳೆ ಮಳೆ ಕಡಿಮೆಯಾಗಿದ್ದು ಮನೆಗಳಿಗೆ ನುಗ್ಗಿರುವ ನೀರು ಇಳಿದಿದೆ.