ಮನೆಗಳಿಗೆ ನುಗ್ಗಿದ ಗೂಡ್ಸ್ ಆಟೋ

ಕೊಳ್ಳೇಗಾಲ: ತಾಲೂಕಿನ ಟಗರಪುರ ಮೋಳೆ ಗ್ರಾಮದಲ್ಲಿ ಗುರುವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ ರಾಷ್ಟ್ರೀಯ ಹೆದ್ದಾರಿ- 209 ಬದಿಯ ಮನೆಗಳಿಗೆ ನುಗ್ಗಿತು.

ತಾಲೂಕಿನ ಹನೂರು ಪಟ್ಟಣಕ್ಕೆ ಕುಡಿಯುವ ನೀರಿನ ಬಾಟಲಿಗಳನ್ನು ಸರಬರಾಜು ಮಾಡಿ ವಾಪಸ್ ಮೈಸೂರಿಗೆ ತೆರಳುತ್ತಿದ್ದ ವೇಳೆ ಆಟೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವೆಂಕಟೇಶ್ ಮತ್ತು ಪುಟ್ಟಸ್ವಾಮಿ ಎಂಬುವರ ಮನೆಗೆ ನುಗ್ಗಿತು. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆ ಜೀವಹಾನಿ ಸಂಭವಿಸಿಲ್ಲ. ಆದರೆ, ಮನೆಗಳ ಕಲ್ನಾರ್ ಶೀಟ್ ಮತ್ತು ಹೆಂಚುಗಳು ಜಖಂಗೊಂಡಿವೆ. ಹುಣಸೂರು ತಾಲೂಕಿನ ರಾಮೇಗೌಡನಹಳ್ಳಿ ಗ್ರಾಮದ ನಿವಾಸಿ, ಚಾಲಕ ಮಂಜುನಾಥ್ ಹಾಗೂ ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗಿಲ್ಲ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಎಸ್‌ಐ ವಿ.ಸಿ.ವನರಾಜು ತೆರಳಿ ಪರಿಶೀಲಿಸಿದರು.