ಮನುಷ್ಯ ಆಶಾವಾದಿಯಾಗಿ ಬಾಳಬೇಕು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಶಾಶ್ವತ ಸತ್ಯಅರಿತು ಬಾಳುವುದು ಶ್ರೇಯಸ್ಸಿಗೆ ಮೂಲ. ಜೀವನ ಒಂದು ನಾಣ್ಯವಿದ್ದಂತೆ. ಸುಖ ದು:ಖ ಆ ನಾಣ್ಯದ ಎರಡು ಮುಖ. ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೇ ಸಮತೋಲನದಿಂದ ಬಾಳಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತೆಲಂಗಾಣದ ಕೊಲನಪಾಕ ಚಂಡಿಕಾಂಬಾ ಸಮೇತ ಸ್ವಯಂಭು ಶ್ರೀ ಸೋಮೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ 63ನೇ ಜನ್ಮ ದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬದುಕೊಂದು ಪುಸ್ತಕ. ಪ್ರತಿ ಪುಟದಿಂದ ಏನನ್ನಾದರೂ ತಿಳಿಯಬಹುದು. ಸುಮ್ಮನೇ ಪುಟ ತಿರುವಿ ಹಾಕಬಾರದು. ಅರಿತು ಬಾಳುವುದೇ ಜೀವನ. ಮರೆತು ಮಲಗುವುದೇ ಬಾಳಿನ ಅವನತಿಗೆ ಕಾರಣ. ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳು ಕೂಡಿಯೇ ಇವೆ. ಇವುಗಳನ್ನು ಬೇರ್ಪಡಿಸುವುದು ಬಲು ಕಷ್ಟ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ತೆಲಂಗಾಣ-ಆಂಧ್ರದ ಅಧ್ಯಕ್ಷರಾದ ನೇತಿ ಮಹೇಶ್ವರ, ಹೈದರಾಬಾದನ ಎಂ. ವೀರಮಲ್ಲೇಶ, ನೇತಿ ಜ್ಞಾನೇಶ್ವರ, ವಿಶ್ವೇಶ್ವರಯ್ಯ, ಜಗದೇವ ಹಿರೇಮಠ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಿಚಗುಂದ ಸೋಮಲಿಂಗ ಶಿವಾಚಾರ್ಯ ಸ್ವಾಮಿಗಳು , ಸಿದ್ಧರಬೆಟ್ಟ, ಶಖಾಪುರ, ಕೆಂಗೇರಿ, ಪಾಳಾ, ಹಳ್ಳಿಖೇಡ, ಸ್ಟೇಷನ್ ಬಬಲಾದ, ಸಿಂಧನೂರು ಶ್ರೀಗಳು, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು. ಬಾಬುರಾವ ಬಿರಾದಾರ ಸ್ವಾಗತಿಸಿದರು. ಬಸವಕಲ್ಯಾಣದ ರಮೇಶ ರಾಜೋಳೆ ನಿರೂಪಣೆ ಮಾಡಿದರು. ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು. ಕಲಬುರಗಿಯ ಗಿರಿಯಪ್ಪ ಮುತ್ಯಾ ಅನ್ನ ದಾಸೋಹ ನಡೆಸಿದರು.