More

  ಮನುಕುಲದ ಒಳಿತಿಗೆ ವಿಜ್ಞಾನದ ಬಳಕೆಯಾಗಲಿ

  ಹುಬ್ಬಳ್ಳಿ: ಅಭಿವೃದ್ಧಿ ಹೆಸರಿನಲ್ಲಿ ದುಷ್ಪರಿಣಾಮಗಳನ್ನು ನಿರ್ಲಕ್ಷಿಸಬಾರದು. ವಿಜ್ಞಾನ ಮತ್ತು ತಂತ್ರಜ್ಞಾನವು ಮನುಕುಲದ ಒಳಿತಿಗೆ ಬಳಕೆಯಾಗುವಂತೆ ಎಚ್ಚರ ವಹಿಸಬೇಕು ಎಂದು ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಡಾ. ಎ.ಎಸ್. ಕಿರಣಕುಮಾರ ಹೇಳಿದರು.

  ನಗರದಲ್ಲಿ ಶುಕ್ರವಾರ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3170ರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಅಭಿವೃದ್ಧಿ, ಸುಧಾರಣೆ ಬೇಕು. ಆದರೆ, ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಗರಿಷ್ಠ ಪ್ರಮಾಣದ ಲಾಭ ಪಡೆಯಬೇಕೆಂಬ ಏಕಮುಖ ಧೋರಣೆ ಸರಿಯಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಮುಂದಿನ ಪೀಳಿಗೆಗೂ ಈ ಜಗತ್ತು ಸುಸ್ಥಿರ ಹಾಗೂ ಹಿತಕರವಾಗಿರಬೇಕು ಎಂದರು.

  ಭಾರತದ ಬಾಹ್ಯಾಕಾಶ ಸಂಶೋಧನೆಯಿಂದ ಸಂವಹನ, ದೂರ ಸಂವೇದಿ (ರಿಮೋಟ್ ಸೆನ್ಸಿಂಗ್), ನ್ಯಾವಿಗೇಶನ್, ಹವಾಮಾನ ವೈಪರೀತ್ಯ ತಿಳಿದುಕೊಳ್ಳಲು ಸಾಕಷ್ಟು ಅನುಕೂಲವಾಗಿದೆ. ಗರಿಷ್ಠ 20 ಕಿ.ಮೀ. ಅಂತರದಲ್ಲಿ ಹಾಗೂ 20 ನಿಮಿಷ ವ್ಯತ್ಯಾಸದಲ್ಲಿ ಹವಾಮಾನ ಮುನ್ಸೂಚನೆಯನ್ನು ಪಡೆಯಬಹುದಾಗಿದೆ. ತ್ವರಿತವಾಗಿ ಸ್ಥಳೀಯ ಭಾಷೆಯಲ್ಲಿ ಹವಾಮಾನ ಮುನ್ಸೂಚನೆಯನ್ನು ನೀಡುವಷ್ಟು ಪ್ರಗತಿ ಸಾಧಿಸಿದ್ದೇವೆ. ಬಾಹ್ಯಾಕಾಶ ಸಂಶೋಧನೆಯೂ ಮೀನುಗಾರರಂಥ ಅನಕ್ಷರಸ್ಥರಿಗೂ ಒಳಿತು ಮಾಡಿದೆ ಎಂದರು.

  ಹು-ಧಾ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ ಮಾತನಾಡಿ, ಜಗತ್ತಿನಲ್ಲಿ ಪ್ರತಿ 40 ಸೆಕೆಂಡ್​ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಹಿಂಸೆ, ಅನಾಚಾರ, ದೌರ್ಜನ್ಯ ಹೆಚ್ಚುತ್ತಿದೆ. ಮನುಷ್ಯನಲ್ಲಿ ಆತಂಕ, ಅಶಾಂತಿ, ಒತ್ತಡ ಹೆಚ್ಚುತ್ತಿದೆ. ಇದಕ್ಕೆಲ್ಲ ನಾವು ಆಧ್ಯಾತ್ಮಿಕತೆಯಿಂದ ದೂರವಾಗಿರುವುದು ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.

  ರೋಟರಿ ಜಿಲ್ಲಾ ಗವರ್ನರ್ ಡಾ. ಗಿರೀಶ ಮಾಸೂರಕರ ಮಾತನಾಡಿ, 2019-20 ರೋಟರಿ ವರ್ಷದಲ್ಲಿ ಉಚಿತವಾಗಿ 10 ಸಾವಿರ ಕ್ಯಾಟರ್ಯಾಕ್ಟ್ ಸರ್ಜರಿ ನಡೆಸುವ ಗುರಿ ಇಟ್ಟುಕೊಂಡಿದ್ದೇವೆ. ಈಗಾಗಲೇ 5 ಸಾವಿರ ಕ್ಯಾಟರ್ಯಾಕ್ಟ್ ಸರ್ಜರಿ ಪೂರ್ಣಗೊಳಿಸಿದ್ದೇವೆ. 300 ಶಾಲೆಗಳಿಗೆ ಇ-ಸಾಕ್ಷರತಾ ಕಿಟ್ ವಿತರಿಸುವ ಉದ್ದೇಶವಿದೆ ಎಂದು ತಿಳಿಸಿದರು.

  ರಾಷ್ಟ್ರೀಯ ಮಳೆ ಆಶ್ರಿತ ಪ್ರದೇಶ ಪ್ರಾಧಿಕಾರದ ಸಿಇಒ ಅಶೋಕ ದಳವಾಯಿ, ನಿತಿನ ಡಫ್ರೀಯ, ದಿವ್ಯಾ ಡಫ್ರೀಯ, ಸಂಧ್ಯಾ ಮಾಸೂರಕರ, ಇತರರು ಇದ್ದರು. ಸಮ್ಮೇಳನದ ಚೇರ್ಮನ್ ಎಸ್.ಕೆ. ಯಡಹಳ್ಳಿ ಸ್ವಾಗತಿಸಿದರು. ಆರ್​ಜೆ ಮಾಹಿ ನಿರ್ವಹಿಸಿದರು.  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts