ಮನಸ್ಸು ಶಾಂತವಾಗಿದ್ದರೆ ಉತ್ತಮ ಜೀವನ ಸಾಧ್ಯ

ಶಿವಮೊಗ್ಗ: ಶಾಂತಿಯುತ ಜೀವನ ನಡೆಸುವುದು ಮನುಷ್ಯನ ಬದುಕಿನ ಉದ್ದೇಶ ಆಗಬೇಕು ಎಂದು ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ, 22ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ಆದರ್ಶ ಹಿರಿಯ ದಂಪತಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮನುಷ್ಯನ ಮನಸ್ಸಿನಲ್ಲಿ ಶಾಂತಿ ನೆಲೆಸಿದ್ದರೆ ಉತ್ತಮ ಜೀವನ ನಡೆಸಲು ಸಾಧ್ಯ. ಮನಸ್ಸೇ ಅಶಾಂತವಾಗಿದ್ದರೆ ಮನೆಯ ಪರಿಸರ ಅಶಾಂತವಾಗುತ್ತದೆ. ಸುಖ, ಸಮೃದ್ಧಿ, ಐಶ್ವರ್ಯ ಇದ್ದರೂ ವ್ಯಕ್ತಿಯ ಮನಸ್ಸು ಸರಿಯಿರದಿದ್ದರೆ ಕೌಟುಂಬಿಕ ವಾತಾವರಣ ಕೂಡ ಸರಿ ಇರುವುದಿಲ್ಲ. ಭಗವಂತ ಸ್ಮರಣೆಯೊಂದಿಗೆ ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಮನುಷ್ಯ ಅತಿಯಾದ ಆಸೆಗಳನ್ನು ಹೊಂದಬಾರದು. ಆಸೆಗಳಿದ್ದರೆ ಸಹಜವಾಗಿ ಈಡೇರದಿದ್ದಾಗ ನಿರಾಶೆ, ದುಖಃ ಆವರಿಸುತ್ತದೆ. ದೇವರು ಕರುಣಿಸುವ ಇತಿಮಿತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಅಹಂಕಾರ, ಅಜ್ಞಾನ, ದೋಷಗಳನ್ನು ಸರಿಪಡಿಸಿಕೊಂಡು ಆಧ್ಯಾತ್ಮಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಸಾಮೂಹಿಕ ವಿವಾಹ ಹಾಗೂ ಆದರ್ಶ ದಂಪತಿ ಸನ್ಮಾನಿಸುವ ಕಾರ್ಯಕ್ರಮ ಒಂದೇ ವೇದಿಕೆಯಡಿ ಮಾಡುವ ಉದ್ದೇಶ ಎಲ್ಲರೂ ಅರಿತುಕೊಳ್ಳಬೇಕು. ಸುದೀರ್ಘ ದಾಂಪತ್ಯ ಜೀವನ ನಡೆಸಿ ಹೊಂದಾಣಿಕೆಯಿಂದ ಬದುಕುವ ರೀತಿಯನ್ನು ಹಿರಿಯ ನಾಗರಿಕರಿಂದ ಯುವ ಜೋಡಿಗಳು ಕಲಿಯಬೇಕು. ಬದುಕಿನ ಉನ್ನತಿಗೆ ಹಿರಿಯರ ಮಾರ್ಗದರ್ಶನ ಅವಶ್ಯಕ ಎಂದು ಹೇಳಿದರು.

ಯುವ ಜೋಡಿಗಳಿಗೆ ಹಾಗೂ ಆದರ್ಶ ದಂಪತಿಗೆ ಶ್ರೀ ನಿರ್ಮಲಾನಾಂದನಾಥ ಸ್ವಾಮೀಜಿ ಹಾಗೂ ಡಾ. ಶ್ರೀ ಸ್ವರೂಪಾನಂದ ಸ್ವಾಮೀಜಿ ಆಶೀರ್ವದಿಸಿದರು. ಶ್ರೀ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಶ್ರೀಗಳಿಂದ ಆಶೀರ್ವಾದ ಪಡೆದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕಡಿದಾಳ್ ಗೋಪಾಲ್, ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್, ಡಿ.ವಿ.ರಮೇಶ್ ಮತ್ತಿತರರಿದ್ದರು.

ನಾಲ್ಕು ಜೋಡಿ ವಿವಾಹ, 22 ದಂಪತಿಗೆ ಸನ್ಮಾನ: ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿ ವಿವಾಹ ನೆರವೇರಿತು. ಸರಳ ಸಾಂಪ್ರದಾಯಿಕ ಆಚರಣೆಯೊಂದಿಗೆ ವಿವಾಹವಾಯಿತು. ವಧು ವರರು ಶ್ರೀ ಕಾಲಭೈರವೇಶ್ವರ ಸ್ವಾಮಿ ದರ್ಶನ ಪಡೆದ ನಂತರ ಶ್ರೀಗಳಿಂದ ಆಶೀರ್ವಾದ ಪಡೆದರು. 50ವರ್ಷಕ್ಕೂ ಅಧಿಕ ದಾಂಪತ್ಯ ಜೀವನ ನಡೆಸಿದ 22 ಆದರ್ಶ ದಂಪತಿಗೆ ಶ್ರೀಗಳು ಆಶೀರ್ವದಿಸಿದರು. ಇದಕ್ಕೂ ಮುನ್ನ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಪ್ರಯುಕ್ತ ಬೆಳಗ್ಗೆಯಿಂದಲೇ ಹೋಮ ಹವನ, ಕಾಲಭೈರವನಿಗೆ ಕುಂಭಾಭಿಷೇಕ, ಮಹಾಮಂಗಳಾರತಿ ನಡೆಸಲಾಯಿತು.

Leave a Reply

Your email address will not be published. Required fields are marked *