(3.4.73ರಿಂದ 80)
| ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ
ಶ್ರೀ ವಸಿಷ್ಠರ ವಿವರ್ತವಾದವನ್ನು ಕೇಳಿದ ಶ್ರೀರಾಮನು ಎಲ್ಲರಿಗೂ ಬರುವ ಪ್ರಶ್ನೆ ಕೇಳುತ್ತಾನೆ. ಜಗತ್ತು ಪರಮಾರ್ಥ ಸತ್ಯವಲ್ಲ, ಪರಮಾರ್ಥ ಸತ್ಯವಾದ ಪರಬ್ರಹ್ಮದ ತೋರಿಕೆ. ಪರಬ್ರಹ್ಮವೇ ಜಗತ್ತಿನ ರೂಪದಿಂದ ತೋರಿಕೊಂಡಿದೆ. ಇದು ವಸಿಷ್ಠರ ವಿವರ್ತವಾದದ ಸಾರ. ಇದನ್ನು ಕೇಳಿದ ಶ್ರೀರಾಮನ ಪ್ರಶ್ನೆ – ಸತ್ಯವಲ್ಲದ್ದು ತೋರಲು ಹೇಗೆ ಸಾಧ್ಯ? ಬಂಜೆಯ ಮಗನು ಪರ್ವತವನ್ನು ಪುಡಿ ಮಾಡುತ್ತಾನೆಂದು ಹೇಳಿದರೆ ಎಷ್ಟು ಅಸಂಭವವೋ ಅಷ್ಟೇ ಅಸಂಭವ ಇದು. ಶ್ರೀರಾಮನ ಪ್ರಶ್ನೆಯ ಉಳಿದ ಭಾಗ ಮತ್ತು ಅದಕ್ಕೆ ವಸಿಷ್ಠರ ಉತ್ತರವನ್ನು ನೋಡಬೇಕಿದೆ.
ಶ್ರೀರಾಮನು ಕೇಳುತ್ತಿದ್ದಾನೆ; ‘ಪೂಜ್ಯರೇ! ಈ ಜಗತ್ತು ಇಲ್ಲವೆಂಬುದಾಗಿ ನಿಮ್ಮಂಥವರು ನನ್ನಂಥವರಿಗೆ ಹೇಳುವುದು ಸರಿಯೇ? ಏಕೆ ಹೀಗೆ ಹೇಳುತ್ತಿದ್ದೇನೆಂದರೆ ನೀವು ಪರಮ ಪ್ರಾಮಾಣಿಕರು. ವಿವೇಕ, ವೈರಾಗ್ಯಶಾಲಿಗಳು. ಇಂಥ ನೀವು ಇಂತಹ ನನಗೆ ಹೀಗೆ ಹೇಳುವುದುಂಟೇ? ನನ್ನ ಆಶಯವಿಷ್ಟೇ. ಮುಪ್ಪು, ಮರಣ, ದುಃಖ ಮುಂತಾದವು ಒಂದೊಂದೂ ಈ ಜಗತ್ತಿನಲ್ಲಿ ಬೆಟ್ಟದಷ್ಟೇ ದೊಡ್ಡದಿವೆ. ಆಕಾಶದಷ್ಟು ಅನಂತವಾಗಿವೆ. ಇದನ್ನು ನಾವೆಲ್ಲರೂ ಅನುಭವಿಸುತ್ತಿರುವಾಗ ಈ ಜಗತ್ತು ಇಲ್ಲವೆಂದು ಹೇಗೆ ಹೇಳುವುದು? ಇದು ನನ್ನ ಆಶಯವಷ್ಟೇ ಅಲ್ಲ, ಎಲ್ಲ ಪಾಮರರ ಆಶಯವೂ ಆಗಿದೆ. ಈ ಜಗತ್ತು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಇದು ಉತ್ಪತ್ತಿಯೇ ಆಗಲಿಲ್ಲ ಎಂಬ ನಿಶ್ಚಯ ನನಗೆ ಆಗುತ್ತಿಲ್ಲ. ಅದು ನಿಶ್ಚಯವಾಗುವಂತೆ ನನಗೆ ಹೇಳಿ.’
ವಸಿಷ್ಠರು ಉತ್ತರಿಸುತ್ತಿದ್ದಾರೆ: ‘ರಾಘವ! ನಾನು ಸಮನ್ವಯವಿಲ್ಲದ ಮಾತುಗಳನ್ನು ಹೇಳುತ್ತಿಲ್ಲ. ಹಿಂದೆ ಏನನ್ನೋ ಹೇಳಿ ಮುಂದೆ ಅದಕ್ಕೆ ಹೊಂದಿಕೆಯಾಗದ ಮಾತುಗಳನ್ನು ಹೇಳುತ್ತಿಲ್ಲ. ಅಥವಾ ಶ್ರುತಿವಾಕ್ಯಗಳು ಸಮನ್ವಯಗೊಂಡು ಪ್ರತಿಪಾದಿಸುವ ವಿಷಯವನ್ನು ಬಿಟ್ಟು ಅದಕ್ಕೆ ವಿರುದ್ಧ ವಿಷಯವನ್ನೂ ಹೇಳುತ್ತಿಲ್ಲ. ನಾನು ಹೇಳುವ ಮಾತನ್ನು ಗಮನವಿಟ್ಟು ಕೇಳು. ಈ ಜಗತ್ತು ಪರಮಾರ್ಥ ಸತ್ಯವಲ್ಲದಿದ್ದರೂ ಇದು ನಿಜವಾಗಿಯೂ ಇದೆಯೋ ಎಂಬಂತೆ ತೋರುತ್ತಿದೆ. ‘‘ಬಂಜೆಯ ಮಗನು ಕೂಗುತ್ತ ಬರುತ್ತಿದ್ದಾನೆ’’ ಎಂದು ಹೇಳಿದಾಗ ಒಂದು ಕ್ಷಣ ಬಂಜೆಯ ಮಗನು ಕೂಗುತ್ತ ಬರುತ್ತಿರುವ ಚಿತ್ರ ನಮ್ಮ ಮನಸ್ಸಿನಲ್ಲಿ ತೋರಿಕೊಂಡು ಬಂಜೆಯ ಮಗನು ಇದ್ದಾನೆ ಎಂಬಂತೆ ಭಾಸವಾಗುತ್ತದೆ. ಹಾಗೆಯೇ ಜಗತ್ತು ಇದೆ ಎಂಬ ಮಾತನ್ನು ಮತ್ತೆ ಮತ್ತೆ ಹೇಳುತ್ತ ಚಿಂತಿಸುತ್ತ ಅನೇಕ ಜನ್ಮಗಳು ಕಳೆದಿದ್ದರಿಂದ ಜಗತ್ತು ಇದೆ ಎಂದೇ ಭಾಸವಾಗುತ್ತದೆ. ಈ ಜಗತ್ತು ಆದಿಯಲ್ಲಿ ಪರಮಾರ್ಥತಃ ಉತ್ಪತ್ತಿಯಾಗುತ್ತಲೇ ಇಲ್ಲ. ಆದ್ದರಿಂದ ಪರಮಾರ್ಥತಃ ಇದು ಇಲ್ಲ ಎಂದು ತಿಳಿದುಕೊಳ್ಳಲು ಇಷ್ಟೇ ಸಾಕು. ಸ್ವಪ್ನದಲ್ಲಿ ಕಾಣುವ ಮಹಾನಗರವು ಮನಸ್ಸಿಗೆ ಮಾತ್ರ ಇರುವಂತೆಯೇ ತೋರುತ್ತದೆ. ಆದರೆ ಅದು ವಸ್ತುತಃ ಉತ್ಪತ್ತಿಯಾಗಲಿಲ್ಲ. ಹಾಗೆಯೇ ಈ ಜಗತ್ತು ಪರಮಾರ್ಥತಃ ಉತ್ಪತ್ತಿಯಾಗಲಿಲ್ಲ, ಹಾಗೆಯೇ ಪರಮಾರ್ಥತಃ ಇಲ್ಲವೂ ಇಲ್ಲ.’
‘ಈ ಮನಸ್ಸಾದರೂ ಪರಮಾರ್ಥತಃ ಉಂಟೇ? ಎಂದು ಕೇಳಿದರೆ ಅದೂ ಇಲ್ಲ. ಏಕೆಂದರೆ ಅದೂ ಪರಮಾರ್ಥತಃ ಉತ್ಪತ್ತಿಯಾಗಲಿಲ್ಲ. ಆದರೂ ಅದು ಜಗತ್ತಿನ ಭ್ರಾಂತಿಯನ್ನು ಉಂಟುಮಾಡುತ್ತದೆ. ತಾನೇ ಸ್ವಯಂ ಭ್ರಾಂತಿಯಾಗಿದ್ದು ಜಗತ್ತೆಂಬ ಭ್ರಾಂತಿಯನ್ನು ಉಂಟುಮಾಡುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ಒಂದು ದೃಷ್ಟಾಂತ ಹೇಳುತ್ತೇನೆ. ಕೆಲವೊಮ್ಮೆ ಒಂದು ಸ್ವಪ್ನವು ಇನ್ನೊಂದು ಸ್ವಪ್ನವನ್ನುಂಟುಮಾಡುವುದೂ ಉಂಟು. ಹಾಗೆ ಪರಮಾರ್ಥತಃ ಇಲ್ಲವಾಗಿರುವ ಮನಸ್ಸು ಪರಮಾರ್ಥತಃ ಇಲ್ಲದ ಜಗತ್ತನ್ನು ಪರಮಾರ್ಥತಃ ಇದೆಯೋ ಎಂಬಂತೆ ತೋರಿಸುತ್ತದೆ. ನೀನು ಹೇಳಿದಂತೆ ಜರಾ, ಮರಣ ಮುಂತಾದ ಕ್ಷಯಗಳು ಈ ಜಗತ್ತಿನಲ್ಲಿ ಅನುಭವಕ್ಕೆ ಬರುತ್ತವೆ. ಮನಸ್ಸೇ ಈ ದೃಶ್ಯಮಯವಾಗಿರುವ ದೋಷವನ್ನು ಉಂಟುಮಾಡುತ್ತದೆ ಮತ್ತು ಹೆಚ್ಚಿಸುತ್ತದೆ.’
‘ಆ ಮನಸ್ಸು ದೇಹವೇ ತಾನೆಂಬುದಾಗಿ ಅಭಿಮಾನಪಡುತ್ತದೆ. ಆಗ ಜಾಗೃದವಸ್ಥೆ ಉಂಟಾಗುತ್ತದೆ. ಅಲ್ಲದೆ ಹೊರಜಗತ್ತಿನ ಇರುವಿಕೆಯ ಅನುಭವವಾಗುತ್ತದೆ. ಮನಸ್ಸು ಶರೀರದ ಮೇಲೆ ಅಭಿಮಾನಪಡದಿದ್ದರೆ ಜಾಗೃದವಸ್ಥೆ, ಬಾಹ್ಯಜಗತ್ತಿನ ಪ್ರಜ್ಞೆಯೂ ಉಂಟಾಗುತ್ತಿರಲಿಲ್ಲ. ಗಾಢನಿದ್ರೆಯಲ್ಲಿದ್ದವನಿಗೆ ಅವನ ಮನಸ್ಸು ಶರೀರದ ಮೇಲೆ ಅಭಿಮಾನಪಡದಿದ್ದುದರಿಂದ ಬಾಹ್ಯಜಗತ್ತೇ ಇಲ್ಲ. ಆದ್ದರಿಂದ ಮನಸ್ಸು ಶರೀರವನ್ನು ಕುರಿತು ಸಂಕಲ್ಪ ಮಾಡಿದ್ದರಿಂದಲೇ ಬಾಹ್ಯಜಗತ್ತು ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ. ಇಂದ್ರಜಾಲದಂತೆ ಅದ್ಭುತ ರಮಣೀಯವಾಗಿರುವ ಜಗತ್ತು ಇರುವಿಕೆಯನ್ನು ಮತ್ತು ಇಷ್ಟೊಂದು ವಿಸ್ತಾರವನ್ನು ಪಡೆದದ್ದು ಮನಸ್ಸಿನ ದೇಹಸಂಕಲ್ಪದಿದಲೇ ಆಗಿದೆ.’
‘ಮನಸ್ಸಿಗೆ ಒಂದು ಚಂಚಲತೆಯ ಶಕ್ತಿ ಇದೆ. ಹಿಂದಿನ ವಾಸನೆಗಳೇ ಆ ಶಕ್ತಿ. ಅದರ ಮೂಲಕ ಅದು ಎಲ್ಲೆಲ್ಲಿ ಚಲಿಸುವುದೋ ಆ ವಿಷಯಗಳೇ ತೋರಿಕೊಳ್ಳುತ್ತ ಹೋಗುತ್ತವೆ. ಹೀಗೆ ಅದು ತಾನು ಅಲುಗಾಡುತ್ತ ವಿಷಯಗಳಲ್ಲಿ ಓಡಾಡುತ್ತದೆ, ವಿಷಯಸುಖಗಳನ್ನು ಬಯಸುತ್ತದೆ, ಅನುಭವಿಸಿದ ಸುಖವಿಷಯಗಳಲ್ಲಿಯೇ ಮತ್ತೆ ಮತ್ತೆ ಸುತ್ತಾಡುತ್ತದೆ, ಸಂಸಾರದಲ್ಲಿ ಮುಳುಗುತ್ತದೆ. ಕೆಲವೊಮ್ಮೆ ಗಾಢನಿದ್ರೆಯಲ್ಲಿ ತನ್ನನ್ನು ಉಪಸಂಹರಿಸಿಕೊಳ್ಳುತ್ತದೆ, ಸಾಂಸಾರಿಕ ಅವಸ್ಥೆಯಲ್ಲಿ ದೈನ್ಯದ ಸ್ಥಿತಿಗೆ ಇಳಿಯುತ್ತದೆ, ವಿಶೇಷ ಸಾಧನೆಗೆ ಒಳಪಡಿಸಿದರೆ ಕೈವಲ್ಯಕ್ಕೆ ಬೇಕಾಗುವ ಉತ್ಕರ್ಷವನ್ನೂ ಹೊಂದುತ್ತದೆ. ಮನಸ್ಸಿನ ಚಂಚಲಶಕ್ತಿ ಮತ್ತು ಅದರ ಸಂಕಲ್ಪಶಕ್ತಿ ಊಹಿಸಲಾಗದಷ್ಟು ದೊಡ್ಡ ಪವಾಡವನ್ನೇ ಮಾಡುತ್ತದೆ.’