ಮನಸ್ಸಿನಲ್ಲಿ ಧರ್ಮಕ್ಕೆ ಮೊದಲ ಸ್ಥಾನವಿರಲಿ

ಶಿರಸಿ: ನಗರದಲ್ಲಿದ್ದೂ ಧರ್ವಚರಣೆಯನ್ನು ಸಮರ್ಪಕವಾಗಿ ನಡೆಸಬಹುದು. ಧರ್ಮಕ್ಕೆ ಮನಸ್ಸಿನಲ್ಲಿ ಮೊದಲ ಜಾಗ ಕೊಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ನಗರದ ಯೋಗ ಮಂದಿರದಲ್ಲಿ ಭಾನುವಾರ ಯೋಜಿಸಲಾಗಿದ್ದ ವಾರ್ಷಿಕೋತ್ಸವದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಿ. ಟಿ. ಹೆಗಡೆ ತಟ್ಟಿಸರ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ನಗರವಾಸಿಗಳು ಪ್ರತಿ ದಿನ ಗೋಗ್ರಾಸ ನೀಡುವ ಉತ್ತಮ ಸಂಪ್ರದಾಯ ರೂಢಿಸಿಕೊಳ್ಳಬೇಕು. ನಗರದ ಸಮೀಪದ ಹಳ್ಳಿಗರೂ ಪೇಟೆ ಜೀವನ ಪದ್ಧತಿಯೆಡೆಗೆ ವಾಲುತ್ತಿರುವುದು ಆತಂಕಕಾರಿ. ನಮ್ಮ ಜೀವನ ಪದ್ಧತಿಯನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದರು.

ಯೋಗಕ್ಕೂ ಶಂಕರ ಭಗವತ್ಪಾದರಿಗೂ ಸಂಬಂಧವಿದೆ. ಯೋಗದಿಂದ ಸಾಧನೆ ಮಾಡಿದರೆ ಪರಮಾತ್ಮನ ಜ್ಞಾನ ಪಡೆಯಬಹುದು. ತಪಸ್ಸಿಲ್ಲದೇ ಪರಮಾತ್ಮಾನುಭವ ಪಡೆಯುವುದು ಕಷ್ಟ. ಪರಮಾತ್ಮ ಜ್ಞಾನದಿಂದಲೇ ಮೋಕ್ಷ ಸಾಧ್ಯ. ನಮಗೆ ಶಂಕರರ ಸಂದೇಶ, ಉಪದೇಶ ಮುಖ್ಯ. ನಮ್ಮ ನಮ್ಮ ನೆಲೆಯಲ್ಲಿ ಮಾಡುವ ಧರ್ವನುಷ್ಠಾನವೂ ತಪಸ್ಸಾಗುತ್ತದೆ. ಧರ್ವನುಷ್ಠಾನ ನೆಲೆಯಿಂದಲೇ ಕೈವಲ್ಯ ಮೋಕ್ಷ ಪಡೆಯಬೇಕು ಎಂದರು.

ಜಿ.ಟಿ. ಹೆಗಡೆ ತಟ್ಟಿಸರ ಸನ್ಮಾನ ಸ್ವೀಕರಿಸಿ ಮಾತನಾಡಿ,‘ ದೇವಸ್ಥಾನ, ಸಹಕಾರಿ ಸಂಘ ಎರಡೂ ಒಂದೇ ದಾರಿಯಲ್ಲಿರಬೇಕು. ಅದೇ ರೀತಿಯಲ್ಲಿ ನಾನೂ ನೋಡಿಕೊಂಡಿದ್ದೇನೆ’ ಎಂದರು.

ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಪ್ರಮುಖರಾದ ಸಿ.ಎನ್.ಹೆಗಡೆ, ಶಿವಾನಂದ ದೀಕ್ಷಿತ, ದಾಮೋದರ ಭಟ್ಟ, ಐ.ಪಿ. ಹೆಗಡೆ ಇತರರು ಇದ್ದರು. ಯೋಗ ಮಂದಿರದ ಉಪಾಧ್ಯಕ್ಷ ಎಸ್.ಎನ್.ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಎಸ್. ಹೆಗಡೆ ವರದಿ ಓದಿದರು.