Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಮನಸಿನ ಮಾತು ಒರೆಗೆ ಹಚ್ಚಿದ್ದರ ಫಲಿತಾಂಶ…

Thursday, 04.01.2018, 3:05 AM       No Comments

ಮಾಮೂಲು ದಾರಿಯನ್ನು ಬಿಟ್ಟು ವಿಭಿನ್ನ ಹಾದಿ ಹಿಡಿದವರೇ ಇತಿಹಾಸ ನಿರ್ವಿುಸಿದ್ದಾರೆ. ಸವೆದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದೋ, ಯಾರೂ ನಡೆಯದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದೋ ಅದು ವೈಯಕ್ತಿಕ ವಿಷಯ. ಆದರೆ ಒಂದು ಉದಾತ್ತ ಉದ್ದೇಶಕ್ಕೋಸ್ಕರ ಕಠಿಣ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ನಮ್ಮ ಅಭಿನಂದನೆಗಳು ಸಲ್ಲಲೇಬೇಕು.

 ನಸಿನ ಮಾತು ಕೇಳಿ ಶಿಕ್ಷಕನಾದವನು ಇಂದಿನ ಈ ಲೇಖನದ ವ್ಯಕ್ತಿ. ಅದರಲ್ಲೇನಿದೆ ವಿಶೇಷ? ಲಕ್ಷಾಂತರ ಮಂದಿ ತಮ್ಮ ಮನಸಿನ ಮಾತು ಕೇಳಿ ವೈದ್ಯರಾಗುತ್ತಾರೆ, ನಟರಾಗುತ್ತಾರೆ, ಶಿಕ್ಷಕರೂ ಆಗುತ್ತಾರೆ, ಅದೇನು ಹೊಸತೇ ಎಂದು ನೀವು ಕೇಳಬಹುದು. ಶಿಕ್ಷಕರಾಗಿದ್ದವರು ಮನಸಿನ ಮಾತು ಕೇಳಿ ಐಎಎಸ್ ಅಧಿಕಾರಿಯಾಗಿದ್ದುಂಟು. ಆದರೆ ಐಎಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು ಶಿಕ್ಷಕನಾಗಿರುವ ಈ ವ್ಯಕ್ತಿ ಯಾರೆಂದು ಈ ಲೇಖನ ಓದುತ್ತಿರುವ ಹತ್ತು ಮಂದಿಯಲ್ಲಿ ಕನಿಷ್ಠ ಒಬ್ಬರಿಗಾದರೂ ಗೊತ್ತಾಗಿರುತ್ತದೆ. ಏಕೆಂದರೆ ಆತ ಶಿಕ್ಷಕನಾಗಿರುವುದು ನೂರೋ ಸಾವಿರವೋ ಮಂದಿಗಲ್ಲ, ಲಕ್ಷ ಲಕ್ಷ ವಿದ್ಯಾರ್ಥಿಗಳ ನೆಚ್ಚಿನ ಹೀರೋ ಆತ.

ಭಾರತದಲ್ಲಿ ಅತ್ಯಂತ ಉನ್ನತ ಮಟ್ಟದ ಉದ್ಯೋಗ ಎಂದು ಪರಿಗಣಿತವಾಗಿರುವವುಗಳ ಪೈಕಿ ಮೊದಲನೆಯದು ಐಎಎಸ್ ಅಧಿಕಾರಿಯ ಹುದ್ದೆ, ಎರಡನೆಯದು ವೈದ್ಯವೃತ್ತಿ. ಆದರೆ ಅವೆರಡನ್ನೂ ಬಿಟ್ಟು ತನಗಿಷ್ಟದ ಬೋಧನೆಯನ್ನು ಆಯ್ಕೆ ಮಾಡಿಕೊಂಡ ಆ ಸಾಹಸಿ ರೋಮನ್ ಸೈನಿ. ಜೈಪುರದ ರೋಮನ್ 2013ರಲ್ಲಿ ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿಯೇ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೇ ಹದಿನೆಂಟನೇ ರ್ಯಾಂಕ್ ಪಡೆದು ಭಾರತೀಯ ಆಡಳಿತ ಸೇವೆ ಸೇರಿದ ಅತ್ಯಂತ ಕಿರಿಯ ಎಂದೆನಿಸಿಕೊಂಡವರು. ಅದಕ್ಕೂ ಮುನ್ನ ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಪ್ರವೇಶಪರೀಕ್ಷೆಯನ್ನು ಕೇವಲ ಹದಿನಾರನೇ ವಯಸ್ಸಿಗೇ ಪಾಸು ಮಾಡಿದ ಪ್ರತಿಭಾವಂತನೂ ಹೌದು.

‘ಭವಿಷ್ಯದಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ, ನನಗೂ ಮೊದಲು ಭಯವಿತ್ತು, ಎರಡು ವರ್ಷ ಸೇವೆ ಸಲ್ಲಿಸಿದ ಐಎಎಸ್ ಅಧಿಕಾರಿಯ (ರಾಜೀನಾಮೆ ಕೊಡುವಾಗ ರೋಮನ್ ಜಬಲ್​ಪುರದ ಜಿಲ್ಲಾಧಿಕಾರಿಯಾಗಿದ್ದರು) ಹುದ್ದೆಯನ್ನು ಬಿಡುವಾಗ ಆತಂಕವೂ ಇತ್ತು. ಆದರೆ ನನ್ನ ಸ್ನೇಹಿತ ಗೌರವ್ ಮುಂಜಾಲ್ ಧೈರ್ಯ ತುಂಬಿದ. ನಮ್ಮ ದೇಶದ ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ. ಉಳ್ಳವರಿಗೆ ಮಾತ್ರ ಮೇಲ್ಮಟ್ಟದ ಶಿಕ್ಷಣ ಎಂಬಂತಾಗಿದೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಪಾರ ಹಣ ಸುರಿದು ತರಬೇತಿ ಪಡೆಯುವ ಸಾಮರ್ಥ್ಯ ಬಹುತೇಕ ಯುವವರ್ಗದವರಲ್ಲಿ ಇರುವುದಿಲ್ಲ. ಹಾಗಾಗಿ ಸರಿಯಾದ ಮಾರ್ಗದರ್ಶನವಿಲ್ಲದೇ ಅವರಿಗೆ ಅನ್ಯಾಯವಾಗುತ್ತಿದೆ. ತಂತ್ರಜ್ಞಾನದ ಮೂಲಕ ಅತ್ಯುತ್ತಮ ತರಬೇತಿ ಉಚಿತವಾಗಿ ಅವರಿಗೆ ಲಭ್ಯವಾಗಬೇಕು, ಅದಕ್ಕೆ ನಾವು ರಿಸ್ಕ್ ತೆಗೆದುಕೊಳ್ಳಲೇಬೇಕು ಎಂದು ಆತ ನನಗೆ ಮನದಟ್ಟು ಮಾಡಿಕೊಟ್ಟ’ ಎನ್ನುತ್ತಾರೆ ರೋಮನ್.

ಹೌದು, ಪ್ರತಿವರ್ಷ ಸುಮಾರು ಆರೂವರೆ ಲಕ್ಷ ಜನರು ಭಾರತೀಯ ಆಡಳಿತ ಸೇವೆಯ ಪರೀಕ್ಷೆ ಬರೆದರೂ ಕೋಚಿಂಗ್ ಪಡೆಯಲು ಸಾಧ್ಯವಾಗುವುದು ಒಂದೂವರೆ ಲಕ್ಷ ಜನರಿಗೆ ಮಾತ್ರ. ಚಿಕ್ಕ ಚಿಕ್ಕ ಊರುಗಳ ವಿದ್ಯಾರ್ಥಿಗಳಿಗೆ, ಸಣ್ಣ ಪುಟ್ಟ ಕೆಲಸ ಮಾಡಿಕೊಂಡೇ ಪರೀಕ್ಷಾ ತಯಾರಿ ನಡೆಸುವವರಿಗೆ, ಹಣಕಾಸಿನ ಸಂಪನ್ಮೂಲ ಇಲ್ಲದವರಿಗೆ ಬೆಂಗಳೂರಿಗೋ, ದೆಹಲಿಗೋ, ಮುಂಬೈಗೋ ಹೋಗಿ ತರಬೇತಿ ಪಡೆಯುವುದು ಅಸಾಧ್ಯದ ಮಾತು. ಹಾಗೆಯೇ, ಕೋಚಿಂಗ್ ಪಡೆಯಲು ಸಾಧ್ಯವಿಲ್ಲದ ಆ ಐದುಲಕ್ಷಕ್ಕೂ ಅಧಿಕ ಆಕಾಂಕ್ಷಿಗಳಿಗಾಗಿ ಸ್ಥಾಪನೆಯಾಗಿದ್ದು ಅನ್​ಅಕಾಡೆಮಿ(UNACADEMY) . ಸ್ನೇಹಿತ ಗೌರವ್ ಮುಂಜಾಲ್ ಮಾರ್ಗದರ್ಶನದಲ್ಲಿ ಹೇಮೇಶ್ ಸಿಂಗ್, ಸಚಿನ್ ಗುಪ್ತಾ ಜತೆಸೇರಿ ಅನ್​ಅಕಾಡೆಮಿ ಎಂಬ ಉಚಿತ ಆನ್​ಲೈನ್ ಕೋಚಿಂಗ್ ಸಂಸ್ಥೆಯನ್ನು ರೋಮನ್ ಸ್ಥಾಪಿಸಿದ. ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಯೇ! 2015 ರಲ್ಲಿ ಶುರುವಾದ ಈ ಸಾಹಸಕ್ಕೆ ಇದೀಗ ಎರಡು ವರ್ಷ ತುಂಬಿದೆ. ಎರಡೇ ವರ್ಷದಲ್ಲಿ ಯೂಟ್ಯೂಬ್​ನ ಅತ್ಯಂತ ದೊಡ್ಡ ಶೈಕ್ಷಣಿಕ ಚಾನೆಲ್​ಗಳಲ್ಲಿ ಒಂದಾಗಿದೆ ಅನ್​ಅಕಾಡೆಮಿ. ಈ ಸಾಹಸದ ಮೂಲ ಪ್ರೇರಣೆ ಗೌರವ್ ಆದರೂ ಅದರ ಬೆನ್ನುಮೂಳೆ ರೋಮನ್. ಉತ್ತಮ ತರಬೇತಿಯನ್ನು ಯುವಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಪಡುತ್ತಿರುವ ಯುವಕರ ಈ ಗುಂಪಿನ ಚಂದಾದಾರರ ಸಂಖ್ಯೆ ಹತ್ತುಲಕ್ಷ ದಾಟಿದೆ. 2016ರಲ್ಲಿ ಇದರ ಲರ್ನಿಂಗ್ ಆಪ್ ಕೂಡ ಬಿಡುಗಡೆಯಾಗಿದೆ. ಸೌಲಭ್ಯ ವಂಚಿತ ಯುವಕರಿಗೆ ಅಸಾಂಪ್ರದಾಯಿಕವಾಗಿ ತರಬೇತಿ ನೀಡುತ್ತಿರುವ ಸಂಸ್ಥೆ ಎಂದು ಅನ್​ಅಕಾಡೆಮಿಯನ್ನು ಟೈಮ್್ಸ ಆಫ್ ಇಂಡಿಯಾ ಬಣ್ಣಿಸಿತ್ತು. ಇಲ್ಲಿ ತರಬೇತಿ ಸಂಪೂರ್ಣ ಉಚಿತವಾಗಿರುತ್ತದೆ. ಆದರೆ ಗುರುದಕ್ಷಿಣೆಯ ಮಾದರಿಯಲ್ಲಿ ಸಂಸ್ಥೆಗೆ ಹಣ ನೀಡುವ ಮನಸ್ಸಿದ್ದವರು ಸಹಾಯ ಮಾಡಬಹುದು ಅಷ್ಟೇ. ಈ ಹೊಸ ಸ್ಟಾರ್ಟಪ್​ನ ಜನಪ್ರಿಯತೆ ಮತ್ತು ಉಪಯುಕ್ತತೆಯನ್ನು ಮನಗಂಡು ಅದರ ಮೇಲೆ ಹಣ ಹೂಡಲು ಯುವ ಉದ್ಯಮಿಗಳು ಮುಂದೆ ಬಂದಿರುವುದು ಸ್ವಾಗತಾರ್ಹ ವಿಚಾರ. ಇದರಿಂದ ಇನ್ನೂ ಗುಣಮಟ್ಟದ ಶಿಕ್ಷಣ ನೀಡಲು, ಒಳ್ಳೆಯ ಬೋಧಕರನ್ನು ನೇಮಿಸಿಕೊಳ್ಳಲು ಅನುಕೂಲವಾಗುತ್ತದೆ.

ಈ ಶೈಕ್ಷಣಿಕ ವೇದಿಕೆಯಲ್ಲಿ ಬೇರೆ ಬೇರೆ ವಿಷಯಗಳ ಮೇಲೆ ಎಂಟು ಹತ್ತು ನಿಮಿಷದ ವಿಡಿಯೋಗಳಿರುತ್ತವೆ. ಚಿತ್ರಗಳು, ವಿಡಿಯೋಗಳ ಮೂಲಕ ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಹೇಳಿಕೊಡಲಾಗುತ್ತದೆ. ರೋಮನ್ ಸೈನಿಯ ಆನ್​ಲೈನ್ ತರಗತಿಗಳನ್ನು ನೋಡುವವರಿಗೆ ಅವರ ಆಳವಾದ ವಿಷಯಜ್ಞಾನ, ಸರಳವಾಗಿ ವಿಷಯಗಳನ್ನು ಹೇಳುವ ಕೌಶಲ, ತನಗೆ ಸರಾಗವಾಗಿ ತಿಳಿದ ವಿಚಾರವನ್ನು ಹಂಚಿಕೊಳ್ಳುವ ಹಂಬಲ ಅಚ್ಚರಿ ಹುಟ್ಟಿಸುತ್ತದೆ. ವಿಜ್ಞಾನ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಪ್ರಚಲಿತ ವಿದ್ಯಮಾನ ಹೀಗೆ ಎಲ್ಲ ವಿಷಯಗಳನ್ನೂ ನಿರರ್ಗಳವಾಗಿ ಬೋಧಿಸುವ ಕಲೆ ಅವರಿಗೆ ಕರಗತ. ಎಲ್ಲಕ್ಕೂ ಮಿಗಿಲಾಗಿ ಅವರಲ್ಲಿರುವ ವಿನಯವಂತಿಕೆ ಗೌರವಭಾವ ಮೂಡಿಸುತ್ತದೆ.

ಅತ್ಯುತ್ತಮ ಶಿಕ್ಷಕರು ಮಾತ್ರವಲ್ಲ ಕಲಿಸುವ ಪ್ರೀತಿಯುಳ್ಳ ಶಿಕ್ಷಕರೂ ಇಲ್ಲಿ ಪಾಠ ಮಾಡುತ್ತಾರೆ. ಯಾರಿಗಾದರೂ ಬೋಧನಾ ವೃತ್ತಿ ಅತ್ಯಂತ ಪ್ರೀತಿಯದ್ದಾದರೆ ಅವರು ಮೊಬೈಲ್​ನಲ್ಲಿ ಅನ್​ಅಕಾಡೆಮಿ ಎಜುಕೇಟರ್ ಆಪ್ ಡೌನ್​ಲೋಡ್ ಮಾಡಿಕೊಂಡು ಅದರಲ್ಲಿ ಇಷ್ಟದ ವಿಷಯವನ್ನು ಪಾಠ ಮಾಡುವುದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿ ಕಳುಹಿಸಿದರಾಯಿತು. ನಿಮ್ಮಂತೆಯೇ ಪಾಠ ಮಾಡುವ ಆಸಕ್ತಿಯುಳ್ಳ ಸಾವಿರಾರು ಮಂದಿಯ ಗುಂಪಿಗೆ ನೀವೂ ಸೇರಿಕೊಳ್ಳುತ್ತೀರಿ. ನಿಮ್ಮ ಜ್ಞಾನ, ಸರಳವಾಗಿ ಬೋಧಿಸುವ ಸಾಮರ್ಥ್ಯ ಇವುಗಳ ಆಧಾರದ ಮೇಲೆ ನಿಮ್ಮ ಅರ್ಜಿ ಸ್ವೀಕೃತವಾಗುತ್ತದೆ ಅಥವಾ ನಿರಾಕರಿಸಲ್ಪಡುತ್ತದೆ. ನಿರಾಕರಿಸಲ್ಪಟ್ಟರೆ ತೊಂದರೆಯಿಲ್ಲ, ತಿದ್ದಿಕೊಳ್ಳುವುದಕ್ಕೆ, ಮರಳಿ ಯತ್ನವ ಮಾಡುವುದಕ್ಕೆ ಅನ್​ಅಕಾಡೆಮಿಯಲ್ಲಿ ಅವಕಾಶವಿದೆ. ಇಲ್ಲಿ ಕಿರಣ್ ಬೇಡಿ ಕೂಡ ಪಾಠ ಮಾಡುತ್ತಾರೆ, ಐಎಎಸ್​ನಲ್ಲಿ ರ್ಯಾಂಕ್ ಬಂದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ಜತೆ ನೇರ ಮಾತುಕತೆಯ ಸೆಷನ್ ಇರುತ್ತದೆ. ನಿಮ್ಮ ಅನುಮಾನಗಳನ್ನು ಟೈಪಿಸಿದರೆ ನೇರವಾಗಿ ಉತ್ತರ ಸಿಗುತ್ತದೆ.

ಹೊಗಳಿಕೆಗಳು ಬಂದದ್ದೇನೋ ಸರಿ. ಇಂತಹ ಒಂದು ಯೋಚನೆಗೇ ಹ್ಯಾಟ್ಸಾಫ್ ಹೇಳಬೇಕು. ರೋಮನ್ ಸೈನಿ ಈಗ ಸೆಲೆಬ್ರಿಟಿ. ಅನ್​ಅಕಾಡೆಮಿ ಪ್ರಾರಂಭವಾದ ಮೇಲೆ ಎಲ್ಲಿ ಹೋದರೂ ಅವರು ಗುರುತಿಸಲ್ಪಡುತ್ತಾರೆ. ಕೋರಾ(QUORA) ಎಂಬ ಬಹು ಜನಪ್ರಿಯ ಮೊಬೈಲ್ ಆಪ್​ನಲ್ಲಿ ಜನರು ಪ್ರಶ್ನೆಗಳನ್ನು ಕೇಳುತ್ತಾರೆ, ಅದಕ್ಕೆ ಇನ್ಯಾರೋ ಉತ್ತರಗಳನ್ನೂ ಕೊಡುತ್ತಾರೆ. ಅಲ್ಲಿಯೂ ರೋಮನ್ ಅತ್ಯಂತ ಜನಪ್ರಿಯ. ಆದರೆ ತೆಗಳಿಕೆಗಳು! ಸಾಧನೆಯ ದಾರಿಯಲ್ಲಿ ಅದು ಸಾಮಾನ್ಯ. ಕೋರಾದ 2017ರ ಅತ್ಯಂತ ಜನಪ್ರಿಯ ಲೇಖಕ ರೋಮನ್. ಅಲ್ಲಿಯೂ ತಮ್ಮ ಅಸಹನೆಯನ್ನು ತೋಡಿಕೊಳ್ಳುವವರಿದ್ದಾರೆ. ಆತ ಎಂಬಿಬಿಎಸ್ ಮುಗಿಸಲೇ ಇಲ್ಲ, ಐಎಎಸ್ ಮುಗಿಸಲೇ ಇಲ್ಲ ಎಂದು ವಿಷ ಕಾರಿಕೊಳ್ಳುವವರಿದ್ದಾರೆ. ಆತನಿಗೆ ಜನಪ್ರಿಯತೆಯ ಹುಚ್ಚು ಎಂದು ಇನ್ಯಾರೋ ಹೇಳುತ್ತಾರೆ. ಅಲ್ಲಿ ಈ ರೀತಿಯ ನೆಗೆಟಿವ್ ಕಮೆಂಟ್​ಗಳನ್ನು ನೋಡಿ ಅವರ ಅಪ್ಪ ಹೇಳಿದರಂತೆ, ‘ಅಲ್ಲ ಮಾರಾಯ, ನೀನೇನೋ ಕೊಲೆ ಮಾಡಿಬಿಟ್ಟಿದ್ದೀ ಎನ್ನುವ ಹಾಗೆ ಬರೆದಿದ್ದಾರಲ್ಲ’! ಇತರರು ಒಳ್ಳೆಯ ಕೆಲಸ ಮಾಡಿದಾಗ ಟೀಕಿಸುವುದು ಸರ್ವೆಸಾಮಾನ್ಯ. ಇಪ್ಪತ್ತೆರಡನೆಯ ವಯಸ್ಸಿಗೇ ಖ್ಯಾತಿ, ಅಧಿಕಾರ ಎಲ್ಲವನ್ನೂ ಪಡೆದು ಒಂದು ದೊಡ್ಡ ಉದ್ದೇಶಕ್ಕೋಸ್ಕರ ಎಲ್ಲವನ್ನೂ ಬಿಟ್ಟು ಹೊಸದಾರಿ ಆಯ್ದುಕೊಳ್ಳುವುದು ಬಹುದೊಡ್ಡ ಸವಾಲು. ಈ ಸವಾಲು ಸ್ವೀಕರಿಸಿದ ರೋಮನ್ ಸೈನಿ ಮತ್ತು ಟೀಮ್ ಸಾಹಸ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಭರವಸೆಯಾಗಿದೆ. ಆದರೆ ಇತಿಹಾಸ ಸ್ಪಷ್ಟಪಡಿಸಿದೆ- ಮಾಮೂಲು ದಾರಿಯನ್ನು ಬಿಟ್ಟು ವಿಭಿನ್ನ ಹಾದಿ ಹಿಡಿದವರೇ ಇತಿಹಾಸ ನಿರ್ವಿುಸಿದ್ದಾರೆ. ಜನರು ನಡೆದು ಸವೆದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದೋ, ಯಾರೂ ನಡೆಯದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದೋ ಅದು ವೈಯಕ್ತಿಕ ವಿಷಯ. ಆದರೆ ಒಂದು ಉದಾತ್ತ ಉದ್ದೇಶಕ್ಕೋಸ್ಕರ ಕಠಿಣ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ನಮ್ಮ ಅಭಿನಂದನೆಗಳು ಸಲ್ಲಲೇಬೇಕು. ಒಳ್ಳೆಯ ಉದ್ದೇಶ ಸೋಲು ಕಂಡರೂ ಅದು ಅಭಿನಂದನಾರ್ಹವೇ. ಸ್ವಾರ್ಥವನ್ನು ಬಿಟ್ಟು ಇಂತಹ ಭಿನ್ನ ಹಾದಿಯಲ್ಲಿ ಸಾಗುತ್ತಿರುವ ಎಲ್ಲ ಯುವ ಮನಸುಗಳಿಗೆ, ಕನಸುಕಂಗಳಿಗೆ ಶುಭವಾಗಲಿ.

(ಲೇಖಕರು ಉಪನ್ಯಾಸಕರು, ಕವಿಯಿತ್ರಿ)

Leave a Reply

Your email address will not be published. Required fields are marked *

Back To Top