ಮನರಂಜನೆ ಜತೆಗೆ ಸಂದೇಶ ಇರಲಿ

ಚಿಕ್ಕಬಳ್ಳಾಪುರ: ಮನರಂಜನೆ ನೀಡುವುದರ ಜತೆಗೆ ಉತ್ತಮ ಸಂದೇಶ ಸಾರುವ ಸಿನಿಮಾಗಳು ಹೆಚ್ಚಾಗಿ ನಿರ್ವಣವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಅಭಿಪ್ರಾಯಪಟ್ಟರು.

ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡ ಮಕ್ಕಳ ಚಲನಚಿತ್ರೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಪಠ್ಯೇತರ ಚಟುವಟಿಕೆಗಳು ಕೆಲಸದ ಒತ್ತಡ ದೂರ ಮಾಡುತ್ತವೆ. ಅದರಲ್ಲೂ ಸಿನಿಮಾ ವೀಕ್ಷಣೆಯು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಉತ್ತಮ ಸಂದೇಶ ಸಾರುವ ಸಿನಿಮಾಗಳು ಹೆಚ್ಚಾಗಿ ನಿರ್ವಣವಾಗಬೇಕಿದ್ದು, ಜನರೂ ಸಹ ಪ್ರೋತ್ಸಾಹ ನೀಡಬೇಕು ಎಂದರು.

ಜಿಲ್ಲೆಯ 6 ತಾಲೂಕಿನ 13 ಚಿತ್ರಮಂದಿರಗಳಲ್ಲಿ ಜುಲೈ 12 ರಿಂದ ಜು.18 ರವರೆಗೆ (ಭಾನುವಾರ ಹೊರತುಪಡಿಸಿ) ಬೆಳಗ್ಗೆ 8 ರಿಂದ 10 ರವರೆಗೆ ವಿಶೇಷವಾಗಿ ಮಕ್ಕಳ ಸಿನಿಮಾ ಪ್ರದರ್ಶನ ನಡೆಯಲಿದೆ. 3ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ಒಬ್ಬ ವಿದ್ಯಾರ್ಥಿಗೆ 15 ರೂ.ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿನಿತ್ಯ 8,255 ವಿವಿಧ ಶಾಲೆಗಳ ಮಕ್ಕಳು ವಿವಿಧ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲಿದ್ದಾರೆ ಎಂದು ಬಿಇಒ ಶಾಂತಲಾ ತಿಳಿಸಿದರು.

ತಹಸೀಲ್ದಾರ್ ಕೆ.ನರಸಿಂಹಮೂರ್ತಿ, ಮಕ್ಕಳ ಚಿತ್ರ ಸಂಸ್ಥೆ ವ್ಯವಸ್ಥಾಪಕ ಎಸ್.ರಮೇಶ್, ಬಾಲಾಜಿ ಚಿತ್ರಮಂದಿರದ ವ್ಯವಸ್ಥಾಪಕ ವೇಣು ಇತರರಿದ್ದರು.

 

Leave a Reply

Your email address will not be published. Required fields are marked *