ಮಧ್ಯಸ್ಥಿಕೆ ವಕೀಲ ಸಮುದಾಯದ ಹೊಸ ಮಂತ್ರವಾಗಬೇಕು: ಸುಪ್ರೀಂಕೋರ್ಟ್​ನ ನಿವೃತ್ತ ಸಿಜೆ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅಭಿಮತ

ಬೆಂಗಳೂರು: ವಕೀಲರಲ್ಲಿ ಮಧ್ಯಸ್ಥಿಕೆ ಹೊಸ ಮಂತ್ರವಾಗಬೇಕು ಎಂದು ಸುಪ್ರಿಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಹೇಳಿದ್ದಾರೆ.

ಇಂಡಿಯಾ ಲೀಗಲ್ ರೀಸರ್ಚ್ ಫೌಂಡೇಷನ್ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಭಾರತದಲ್ಲಿ ಮಧ್ಯಸ್ಥಿಕೆಯ ಸವಾಲುಗಳು ಮತ್ತು ಅದರ ಭವಿಷ್ಯ’ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಮಧ್ಯಸ್ಥಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರೆ ಬಾಕಿ ಇರುವ ಪ್ರಕರಣಗಳನ್ನು ಬೇಗ ಇತ್ಯರ್ಥಗೊಳಿಸಬಹುದು. ಹೆಚ್ಚಿನ ಸಂಖ್ಯೆಯ ನ್ಯಾಯಾಧೀಶರನ್ನು ನೇಮಿಸುವುದರಿಂದ ಇದು ಸಾಧ್ಯವಿಲ್ಲ ಎಂದರು. ಹೆಚ್ಚಿನ ದಾವೆದಾರರು ಪ್ರಕರಣಗಳ ಮಧ್ಯಸ್ಥಿಕೆಗಳನ್ನು ಸ್ವೀಕರಿಸಲು ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ಒಂದು ಸೂಕ್ತ ಕಾನೂನಿನ ಮಾರ್ಗದ ಅಗತ್ಯವಿದೆ. ದೇಶದಲ್ಲಿ 22 ಸಾವಿರ ಅಧೀನ ನ್ಯಾಯಾಲಯಗಳಿವೆ. ಪ್ರತಿದಿನ ಕನಿಷ್ಠ 120 ದಾವೆದಾರರು ನ್ಯಾಯಾಲಯಗಳಿಗೆ ಭೇಟಿ ನೀಡುತ್ತಾರೆ. 120 ವಕೀಲರ ಜತೆ ಸಾಕ್ಷಿದಾರರು ಇರುತ್ತಾರೆ. ಹೆಚ್ಚಿನ ಪ್ರಕರಣಗಳು ವಿಳಂಬವಾಗುವುದರಿಂದ ಖಾಲಿ ಕೈಯಲ್ಲಿ ಹಿಂದಿರುಗಬೇಕಾಗುತ್ತದೆ. ಇದರಿಂದ ಅವರ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ ಎಂದರು.

ಡಿಜಿಟಲ್ ತಂತ್ರಜ್ಞನ ಬಳಕೆ: ನ್ಯಾಯಾಂಗವು ಹೊಸ ಸಾಧನಗಳು ಮತ್ತು ತಂತ್ರಜ್ಞಾನ ಅಳವಡಿಸಿಕೊಂಡರೆ ವೇಗವಾಗಿ ಪ್ರಕ್ರಿಯೆ ಮುಗಿಸಬಹುದು. ಕೃತಕ ಬುದ್ಧಿಮತ್ತೆ ಬಳಕೆಯೂ ಒಂದು ದೊಡ್ಡ ಹೆಜ್ಜೆಯಾಗಿದೆ. ಪ್ರಧಾನ ಮಂತ್ರಿಗಳು, ಕಾನೂನು ಸಚಿವರು ಈ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸಬೇಕು. ಮಧ್ಯಸ್ಥಿಕೆಯ ಸವಾಲುಗಳ ಪರಿಹಾರಕ್ಕೆ ಡಿಜಿಟಲ್ ತಂತ್ರಜ್ಞನ ಬಳಕೆ ಸರಿಯಾದ ಮಾರ್ಗ ಎಂದು ವೆಂಕಟಾಚಲಯ್ಯ ಹೇಳಿದರು.

ನ್ಯಾ.ಅಲೋಕ್ ಆರಾಧೆ ಮಾತನಾಡಿ, ಹಿಂದಿನ ಕಾಲದ ಉಪನಿಷತ್ತುಗಳಲ್ಲೂ ಮಧ್ಯಸ್ಥಿಕೆ ಎಂಬುದು ಇದೆ. ಇಂದು ವ್ಯಾಪಾರ ತೀವ್ರ ಏರಿಕೆಗತಿಯಲ್ಲಿರುವುದರಿಂದ ಸಂಸತ್ತು ಹೊಸ ಕಾಯ್ದೆಗಳನ್ನು ತರುತ್ತಿದೆ. ಈ ಕಾಯ್ದೆಗಳು ವಾಣಿಜ್ಯ ವಿಷಯಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅನುಕೂಲವಾಗುತ್ತವೆ ಎಂದರು.

ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ, ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್, ನ್ಯಾ. ಟಿ.ಎಸ್ ಠಾಕೂರ್, ನ್ಯಾ. ಬಿ.ವಿ ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.

ಸಮಯಕ್ಕೆ ಮಹತ್ವ ನೀಡಬೇಕಿದೆ

ಅನೇಕ ದಾವೆಗಳಲ್ಲಿ ಮಧ್ಯಸ್ಥಿಕೆಯು ದೇಶಕ್ಕೆ ಉತ್ತಮ ಮಾರ್ಗವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು. ಮೂಲಸೌಕರ್ಯ ನಿರ್ವಣದಲ್ಲಿ ಆರ್ಥಿಕ ಕುಸಿತ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಕುರಿತ ದಾವೆ ವಿಳಂಬವಾದರೆ ಗುತ್ತಿಗೆದಾರರ ಮೇಲೆ ಪರಿಣಾಮ ಬೀರುತ್ತದೆ. ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ದೆಹಲಿಯಿಂದ ಲೈವ್ ಫೀಡ್ ಮೂಲಕ ಹೇಳಿದರು.

Leave a Reply

Your email address will not be published. Required fields are marked *