ಮಧ್ಯಸ್ಥಿಕೆಯಿಲ್ಲದೆ ಸರ್ಕಾರಿ ಸೌಲಭ್ಯ ಪಡೆಯಿರಿ

ಬ್ಯಾಡಗಿ:ಗ್ರಾಮಸ್ಥರು ಸರ್ಕಾರಿ ಸೌಲಭ್ಯ ಪಡೆಯಲು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸಕಾಲ ಯೋಜನೆಯಡಿ ನಿಗದಿತ ಅವಧಿಯಲ್ಲಿ ವಿವಿಧ ಪ್ರಮಾಣ ಪತ್ರ ಪಡೆಯಬಹುದು ಎಂದು ತಹಸೀಲ್ದಾರ್ ಕೆ.ಗುರುಬಸವರಾಜ ಹೇಳಿದರು.

ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ಶನಿವಾರ ಜರುಗಿದ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮಸ್ಥರು ಪಡಿತರ ಚೀಟಿ, ವಿವಿಧ ಮಾಶಾಸನ, ಭೂಮಾಪನ ಸೇರಿ ವಿವಿಧ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ನೀತಿ ಕುರಿತು ಸಾರ್ವಜನಿಕರು ಸಭೆಯಲ್ಲಿ ಪ್ರಸ್ತಾಪಿಸಿದರು. ತಹಸೀಲ್ದಾರ್ ಪ್ರತಿಕ್ರಿಯಿಸಿ, ಅರ್ಹ ಫಲಾನುಭವಿಗಳು ಯಾರ ಮಧ್ಯಸ್ಥಿಕೆಯಿಲ್ಲದೆ, ಪಡಸಾಲೆ ಅಥವಾ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ, ವಿವಿಧ ಯೋಜನೆಗಳ ಸೌಲಭ್ಯ ಪಡೆಯಬಹುದು. ಯಾರಿಗೂ ನಯಾಪೈಸೆ ಕೊಡುವ ಅಗತ್ಯವಿಲ್ಲ ಎಂದರು.

ಫ್ಲೋರೈಡ್ ನೀರು ಪೂರೈಕೆ: ಗ್ರಾಮಸ್ಥ ಹನುಮಂತಪ್ಪ ಅಂಬಲಿ ಮಾತನಾಡಿ, 3 ಸಾವಿರ ಜನಕ್ಕೆ 2 ಕೊಳವೆ ಬಾವಿಗಳಿದ್ದು, ನೀರು ಸಮರ್ಪಕವಾಗಿ ಪೂರೈಸುತ್ತಿಲ್ಲ. ಕೊಳವೆಬಾವಿಯಿಂದ ಫ್ಲೋರೈಡ್ ಮಿಶ್ರಿತ ನೀರು ಲಭ್ಯವಾಗುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮೀಣ ಕುಡಿಯುವ ನೀರು ಇಂಜಿನಿಯರ್​ಗೆ ಸಾಕಷ್ಟು ಬಾರಿ ಗ್ರಾಮಸ್ಥರು ತಿಳಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮದ ನೀರು ಶುದ್ಧೀಕರಿಸುವ ಘಟಕ, ತಿಂಗಳದಲ್ಲಿ ನಾಲ್ಕಾರು ದಿನ ಸ್ಥಗಿತಗೊಳ್ಳಲಿದ್ದು, ದಿನಪೂರ್ತಿ ನೀರಿಗಾಗಿ ಪರದಾಡಬೇಕಿದೆ ಎಂದು ಆಕ್ರೋಶ ಹೊರಹಾಕಿದರು.

ತಾಪಂ ಇಒ ಪರಶುರಾಮ ಪೂಜಾರ ಪ್ರತಿಕ್ರಿಯಿಸಿ, ಹಿಂದೆ ಕೊಳವೆಬಾವಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಪರೀಕ್ಷಿಸಿದ ಬಳಿಕ ನೀರು ಶುದ್ಧೀಕರಿಸುವ ಘಟಕ ಆರಂಭಿಸಲಾಗಿದೆ. ಆದರೆ, ಅಂತರ್ಜಲ ಕುಸಿತ, ವಿದ್ಯುತ್ ಸಮಸ್ಯೆಯಿಂದ ನೀರಿನ ತೊಂದರೆ ಉಲ್ಭಣವಾಗಿದೆ. ಸರ್ಕಾರ ನೀರಿನ ಘಟಕಗಳ ನಿರ್ವಹಣೆಗೆ ಟೆಂಡರ್ ಕರೆದಿದ್ದು, ಇನ್ನು ಮುಂದೆ ಗುತ್ತಿಗೆದಾರರಿಗೆ ನಿರ್ವಹಣೆ ನೀಡಲಾಗುತ್ತಿದ್ದು, ಪರಿಹಾರ ಕಂಡುಕೊಳ್ಳಲು ಹೊಸ ಯತ್ನ ನಡೆದಿದೆ ಎಂದರು.

ಗ್ರಾಮಸ್ಥ ದ್ಯಾಮನಗೌಡ್ರ ಪೂಜಾರ ಮಾತನಾಡಿ, ಗ್ರಾಮದಿಂದ ಪ್ರತಿದಿನ 50ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಶಿಕ್ಷಣದ ಸಲುವಾಗಿ ಹೊರಹೋಗುತ್ತಿದ್ದಾರೆ. ಸಂಜೆ ಖಾಸಗಿ ಬಸ್ ಹೊರತುಪಡಿಸಿ, ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲ. ಹೀಗಾಗಿ ಖಾಸಗಿ ಟಂಟಂ, ಒಮಿನಿ ಸೇರಿ ರಿಕ್ಷಾ ಅವಲಂಬಿಸಬೇಕಾಗಿದೆ. ಬಡಮಕ್ಕಳು ಹೆಚ್ಚು ಹಣ ನೀಡಿ ತೆರಳಲು ಸಾಧ್ಯವಾಗುತ್ತಿಲ್ಲ. ರಾತ್ರಿ ಹೊತ್ತಲ್ಲಿ ದೂರದ ಊರುಗಳಿಂದ ಮರಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಸಾರಿಗೆ ಘಟಕದ ವ್ಯವಸ್ಥಾಪಕರು ಸಭೆಗೆ ಗೈರು ಹಾಜರಾಗಿದ್ದರು. ಅವರ ಬದಲಾಗಿ ಸಿಬ್ಬಂದಿ ಆಗಮಿಸಿದ್ದರು. ಆಗ ತಹಸೀಲ್ದಾರ್, ಗ್ರಾಮದ ಶಾಲಾ ಮಕ್ಕಳಿಗೆ ತೊಂದರೆ ಆಗಕೂಡದು. ಇದಕ್ಕೆ ಪರಿಹಾರ ಕಲ್ಪಿಸಲು ವ್ಯವಸ್ಥಾಪಕರಿಗೆ ತಿಳಿಸಿ ಎಂದು ಸೂಚಿಸಿದರು.

ಒಂದೂವರೆ ವರ್ಷದ ಹಿಂದೆ ಕೃಷಿ ಇಲಾಖೆಯಿಂದ ಗ್ರಾಮದಲ್ಲಿ 120 ಕ್ಕೂ ಹೆಚ್ಚು ಎರೆಹುಳು ತೊಟ್ಟಿ ನಿರ್ವಣಗೊಂಡಿದ್ದು, ಸಹಾಯಧನ ಸೇರಿ ಎನ್​ಆರ್​ಜಿ ಕೂಲಿ ಹಣ ಮಂಜೂರಾಗಿಲ್ಲ. ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹೇಳುತ್ತ ಕಾಲ ಕಳೆಯುತ್ತಿದ್ದು, ರೈತರನ್ನು ತೊಂದರೆಗೆ ಸಿಲುಕಿಸಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಮಂಜುನಾಥ ಅಂಬಲಿ ಮನವಿ ಸಲ್ಲಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಗೈರು ಹಾಜರಾದ ಕಾರಣ, ಗ್ರಾಮಸ್ಥರಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಗ್ರಾ.ಪಂ. ಅಧ್ಯಕ್ಷ ಮೆಹಬೂಬಸಾಬ ಬಿಸಲಹಳ್ಳಿ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಟಿ.ಎಸ್. ವಿಜಯಲಕ್ಷ್ಮಿ, ಭೂಮಾಪನ ಅಧಿಕಾರಿ ಬಿ.ಸಿ. ಹೊಸಕಟ್ಟೆ, ಮುಖಂಡ ಬಸವರಾಜ ಆಣೂರು, ನಾರಾಯಣಪ್ಪ ದೇವಗಿರಿ, ಸಿದ್ದಪ್ಪ ತೆವರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *