ಮಧ್ಯವರ್ತಿಗಳಿಗೆ ಆಸ್ಪದ ನೀಡದಿರಿ

ಮುಳಬಾಗಿಲು: ಕುರುಡುಮಲೆ ಗ್ರಾಮ ಪುರಾಣ ಪ್ರಸಿದ್ಧ ದೇವಾಲಯಗಳ ಪುಣ್ಯ ಕ್ಷೇತ್ರವಾಗಿದ್ದು, ಜಿಲ್ಲೆಯಲ್ಲೇ ಮಾದರಿ ಕ್ಷೇತ್ತವಾಗುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ತಾಲೂಕಿನ ಕುರುಡುಮಲೆ ಗ್ರಾಮದ ಲಕ್ಷ್ಮೀಗಣಪತಿ ದೇವಾಲಯ ಆವರಣದಲ್ಲಿ ಹೋಬಳಿ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿ, ತಾಲೂಕು ಕಚೇರಿ, ತಾಪಂ ಕಾರ್ಯಾಲಯ ಸೇರಿ ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಆಸ್ಪದ ನೀಡಬಾರದು. ನೇರವಾಗಿ ಸಾರ್ವಜನಿಕರ ಅರ್ಜಿ ಸ್ವೀಕರಿಸಿ ಲಂಚ ಪಡೆಯದೆ ಒಂದು ವಾರದಲ್ಲೇ ಸಮಸ್ಯೆ ಬಗೆಹರಿಸಬೇಕು. ಪಾರದರ್ಶಕವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆದುಕೊಳ್ಳಬೇಕು ಎಂದು ಎಚ್ಚರಿಸಿದರು.

ಹೋಬಳಿ ಕೇಂದ್ರ ದುಗ್ಗಸಂದ್ರದಿಂದ ಕುರುಡುಮಲೆಗೆ ಗುಣಮಟ್ಟದ ರಸ್ತೆಯನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಮುಡಿಯನೂರು ಗ್ರಾಪಂ ವ್ಯಾಪ್ತಿಯ ಕೃಷ್ಣಗಿರಿ ಸಮೀಪವಿರುವ ಬೋಡಿಬಂಡೆ ಜಮೀನನ್ನು ಕಲ್ಲುಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಗಮನಕ್ಕೆ ಬಾರದಂತೆ ಮಂಜೂರು ಮಾಡಿದ್ದಾರೆ. ಇದರಿಂದ ಕಲ್ಲುಬಂಡೆ ಕೆಲಸ ಮಾಡುವ ಸುತ್ತಮುತ್ತಲ ಗ್ರಾಮದ ಸಾವಿರಾರು ಕುಟುಂಬ ಬೀದಿಗೆ ಬೀಳುವಂತಾಗಿದೆ. ಇದನ್ನು ತಡೆದು ಹಲವಾರು ವರ್ಷಗಳಿಂದ ಕಲ್ಲುಬಂಡೆ ಕೆಲಸ ಮಾಡುತ್ತಿರುವರಿಗೆ ಕೆಲಸ ಮುಂದುವರಿಸಲು ಅವಕಾಶ ಮಾಡಿಕೊಡಬೇಕೆಂದು ಬಂಡೆ ಕಾರ್ಮಿಕರು ಸಚಿವರಿಗೆ ಮನವಿ ಸಲ್ಲಿಸಿದಾಗ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್ ಮಾತನಾಡಿ, ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಚರಂಡಿಗಳಿಗೆ ತ್ಯಾಜ್ಯ ಹಾಕದಂತೆ ಸ್ಥಳೀಯರೇ ನೋಡಿಕೊಳ್ಳಬೇಕು. ಗ್ರಾಪಂನಿಂದ ತಿಂಗಳಿಗೊಮ್ಮೆ ಚರಂಡಿ ಸ್ವಚ್ಛ ಮಾಡಲು ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ದುಗ್ಗಸಂದ್ರ ಕ್ಷೇತ್ರದ ಜಿಪಂ ಸದಸ್ಯ ಉತ್ತನೂರು ವಿ.ಎಸ್.ಅರವಿಂದ್‌ಕುಮಾರ್ ಮಾತನಾಡಿ, ಸಚಿವರು ಪ್ರಪ್ರಥಮ ಬಾರಿಗೆ ಹೋಬಳಿ ಮಟ್ಟದ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಿರುವುದರಿಂದ ನೇರವಾಗಿ ಅರ್ಜಿಗಳನ್ನು ಸಲ್ಲಿಸಿ ಪರಿಹಾರ ಪಡೆಯಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ಮಟ್ಟದಲ್ಲಿ ಸಭೆ ಆಯೋಜಿಸಲಾಗುವುದು ಎಂದರು.

ತಹಸೀಲ್ದಾರ್ ಬಿ.ಎನ್.ಪ್ರವೀಣ್, ಇಒ ಎಂ.ಬಾಬು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಿರೆಡ್ಡಿ, ಮಾಜಿ ಅಧ್ಯಕ್ಷ ಉತ್ತನೂರು ಶ್ರೀನಿವಾಸ್, ತಾಪಂ ಉಪಾಧ್ಯಕ್ಷೆ ಸುಜಾತಾ ಲಕ್ಷ್ಮೀನಾರಾಯಣ, ಸದಸ್ಯರಾದ ಕೆ.ವಿ.ಅರುಣಾ ವೆಂಕಟರಾಮಾಚಾರಿ, ಸುನಂದಮ್ಮ ವೆಂಕಟರಾಮಪ್ಪ, ಶಶಿಕಲಾ ನಾಗರಾಜ್, ಜಿಪಂ ಸದಸ್ಯೆ ನಾಗವೇಣಿ ಸುಬ್ರಮಣಿರೆಡ್ಡಿ, ಕುರುಡುಮಲೆ ಗ್ರಾಪಂ ಅಧ್ಯಕ್ಷೆ ರಾಮಕ್ಕ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *