ಮಧ್ಯರಾತ್ರಿ ಸುರಿದ ಭಾರಿ ಮಳೆ

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ಬುಧವಾರ ಮಧ್ಯರಾತ್ರಿ ಗುಡುಗು, ಸಿಡಿಲು ಸಹಿತ ಭಾರಿ ಗಾಳಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ನಗರದ ದೇವರಗುಡ್ಡ, ಕೂನಬೇವು, ಕುಪ್ಪೇಲೂರ ರಸ್ತೆ ಸೇರಿ ವಿವಿಧೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ದೇವರಗುಡ್ಡ ರಸ್ತೆಯ ಗೋ-ಶಾಲೆ ಶೆಡ್ಡಿನ ತಗಡುಗಳು ಗಾಳಿಗೆ ಹಾರಿ ಹೋಗಿವೆ.

ತಾಲೂಕಿನ ಉದಗಟ್ಟಿ ಗ್ರಾಮದ ಸಂತೋಷ ಎಚ್.ಪಿ. ಎಂಬುವರ ಭತ್ತದ ಗೋದಾಮಿನ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಗೋದಾಮಿನ ಸಿಮೆಂಟ್ ಶೀಟುಗಳು ಧ್ವಂಸ ಗೊಂಡಿವೆ. ಒಳಗಡೆ ಸಂಗ್ರಹಿಸಲಾಗಿದ್ದ 50 ಕ್ವಿಂಟಾಲ್​ನಷ್ಟು ಭತ್ತ ಸಂಪೂರ್ಣ ನೀರಿನಲ್ಲಿ ತೋಯ್ದು ಹೋಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಸಿ.ಎಸ್. ಕುಲಕರ್ಣಿ, ಕಂದಾಯ ನಿರೀಕ್ಷಕ ವಾಗೀಶ ಮಳಿಮಠ ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನಗರ ಹಾಗೂ ತಾಲೂಕಿನ ಅಂಕಸಾಪುರ, ಉದಗಟ್ಟಿ, ಕೂನಬೇವು, ಹುಲಿಹಳ್ಳಿ, ನೂಕಾಪುರ, ಹೊನ್ನತ್ತಿ, ಹರನಗಿರಿ, ಚಿಕ್ಕಹರಳಹಳ್ಳಿ ಮತ್ತು ವಿವಿಧ ಗ್ರಾಮಗಳಲ್ಲಿ ಮನೆಗಳ ಮೇಲೆ ವಿದ್ಯುತ್ ಕಂಬ ಹಾಗೂ ಮರಗಳು ಮುರಿದು ಬಿದ್ದಿವೆ. ಕೆಲವೆಡೆ ಮಳೆಗಾಳಿಗೆ ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, 70ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ರೈತರ ಕಣ್ಣೀರು

ತಾಲೂಕಿನ ಉದಗಟ್ಟಿ, ಮೇಡ್ಲೇರಿ, ಹರನಗಿರಿ ಸೇರಿ ವಿವಿಧ ಗ್ರಾಮಗಳಲ್ಲಿ ನೀರಾವರಿ ಮಾಡಿಕೊಂಡು ಬೆಳೆದಿದ್ದ 10 ಎಕರೆಯಷ್ಟು ಎಲೆಬಳ್ಳಿ ತೋಟ, 30 ಎಕರೆಯಷ್ಟು ಬಾಳೆ ತೋಟ, 150ಕ್ಕೂ ಅಧಿಕ ತೆಂಗಿನ ಮರಗಳು, 60ಕ್ಕೂ ಅಧಿಕ ಮಾವಿನ ಮರಗಳು ನೆಲಕ್ಕುರುಳಿದ್ದು, ರೈತರು ಕಣ್ಣೀರು ಹಾಕುವಂತಾಗಿದೆ.

ತಹಸೀಲ್ದಾರರು, ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ಘಟನಾ ಸ್ಥಳಗಳಿಗೆ ಭೇಟಿ ನೀಡಿ, ನಷ್ಟ ಅನುಭವಿಸಿದ ರೈತರಿಗೆ ಹಾಗೂ ಸೂರು ಕಳೆದುಕೊಂಡವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *