ಬೆಂಗಳೂರು: ಟೈಟಲ್ ಮೂಲಕವೇ ಗಮನಸೆಳೆದಿರುವ ನಾಗರಾಜ್ ಸೋಮಯಾಜಿ ನಿರ್ದೇಶನದ ಸಿನಿಮಾ ‘ಮರ್ಯಾದೆ ಪ್ರಶ್ನೆ’. ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ಜಾನರ್‌ನ ಈ ಚಿತ್ರದಲ್ಲಿ ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರು ಪ್ರಮುಖ ತಾರಾಗಣದಲ್ಲಿದ್ದಾರೆ. ಇದೇ ತಿಂಗಳ 22ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ನ್ನು ಕನ್ನಡದ 16 ಉದಯೋನ್ಮುಖ ನಿರ್ದೇಶಕರು ರಿಲೀಸ್ ಮಾಡಿದರು. ಟ್ರೇಲರ್‌ನಲ್ಲಿ ಬೆಂಗಳೂರಿನ ಮಧ್ಯಮ ವರ್ಗದವರ ಬದುಕಿನ ಎಳೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಕ್ಯಾಬ್ ಡ್ರೈವರ್, ಸೇಲ್ಸ್ ಗರ್ಲ್, ುಡ್ ಡೆಲಿವರಿ ಬಾಯ್ ಹಾಗೂ ಯುವ ರಾಜಕಾರಣಿ ಪಾತ್ರಗಳು ಗಮನಸೆಳೆಯುತ್ತವೆ. ಅವರಿಗೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾಗುವ ಕಥೆಯಿದು. ಚಿತ್ರದ ಕ್ರಿಯೇಟಿವ್ ಹೆಡ್ ಆರ್.ಜೆ.ಪ್ರದೀಪ್, ‘ಕನ್ನಡ ಚಿತ್ರಗಳ ಬಗ್ಗೆ ಪಾಸಿಟಿವ್ ಆಗಿ ಯೋಚಿಸಬೇಕಿದೆ. ಇಲ್ಲಿರುವ 16 ನಿರ್ದೇಶಕರು ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ‘ಮರ್ಯಾದೆ ಪ್ರಶ್ನೆ’ ಕೂಡ ಅದೇ ಸಾಲಿಗೆ ಸೇರಲಿದೆ. ಇಡೀ ತಂಡದ ಕೆಲಸ ಗೆಲ್ಲಬೇಕು’ ಎಂದರು.
ಟ್ರೇಲರ್‌ಗೆ ಕಿಚ್ಚನ ಚಪ್ಪಾಳೆ: ಚಿತ್ರತಂಡಕ್ಕೆ ನಟ ಸುದೀಪ್, ‘ಮರ್ಯಾದೆ ಪ್ರಶ್ನೆ’ಯ ಎಲ್ಲ ಅಂಶಗಳು ನನಗೆ ಇಷ್ಟವಾದವು. ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ತುಂಬಾ ಸೂಕ್ತವಾಗಿದ್ದಾರೆ. ಸುನೀಲ್ ರಾವ್, ರಾಕೇಶ್ ಅಡಿಗ, ಶೈನ್ ಶೆಟ್ಟಿ ಒಳ್ಳೆಯ ಪ್ರತಿಭೆಗಳು. ಟ್ರೇಲರ್‌ನಲ್ಲಿ ವಿಭಿನ್ನತೆ ಇದೆ. ಚಿತ್ರದಲ್ಲಿ ಏನು ಹೇಳಲು ಹೊರಟಿದ್ದೀರಿ ಎಂಬುದನ್ನು ಟ್ರೇಲರ್‌ನಲ್ಲಿ ಸ್ಪಷ್ಟವಾಗಿ ಹೇಳಿದ್ದೀರಿ. ಇಂತಹ ಚಿತ್ರಗಳಿಂದ ಒಂದು ಕಲಿಕೆ ಇರುತ್ತದೆ’ ಎಂದು ವಿಡಿಯೋ ಮೂಲಕ ಶುಭಹಾರೈಸಿದ್ದಾರೆ.