ಮಧ್ಯಕರ್ನಾಟಕದಲ್ಲಿ ಕಮಲ ರಣಕಹಳೆ

| ನವೀನ ಎಂ.ಬಿ. ಚಿತ್ರದುರ್ಗ

ಕರ್ನಾಟಕದಲ್ಲಿ ಕಮಲ ಅರಳಿಸಲು ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಮಧ್ಯಕರ್ನಾಟಕದಲ್ಲಿ ಪ್ರಚಾರದ ರಣಕಹಳೆ ಮೊಳಗಿಸುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದರು.

ಬೆಂಗಳೂರಲ್ಲಿ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ ಬಳಿಕ ಒಂದು ಪಕ್ಕಾ ಲೆಕ್ಕಾಚಾರದೊಂದಿಗೆ ಮೀಸಲು ಕ್ಷೇತ್ರ ಹೊಳಲ್ಕೆರೆಗೆ ಆಗಮಿಸಿದ್ದ ಷಾ, ಇಲ್ಲಿಂದಲೇ ಮತಭೇಟೆ ಶುರು ಮಾಡಿದರು. ಬಿಜೆಪಿ ಹಿಂದುಪರ ಮಾತ್ರವಲ್ಲ ದಲಿತರ, ದಮನಿತರ, ಶೋಷಿತರ, ಅನ್ನದಾತರ ಪರವೂ ಹೌದೆಂಬ ಸಂದೇಶ ಸಾರಲು ಈ ಸಮಾವೇಶವನ್ನು ಸಮರ್ಥವಾಗಿ ಬಳಸಿಕೊಂಡ ಅವರು, ಅಹಿಂದ ಮಂತ್ರ ಜಪಿಸುವ ಕಾಂಗ್ರೆಸ್​ಗೆ ಸಚಿವ ಆಂಜನೇಯ ತವರು ಕ್ಷೇತ್ರದಿಂದಲೇ ತಿರುಗೇಟು ನೀಡಿದರು.

ಪರಿವರ್ತನಾ ಸಮಾವೇಶ ನಡೆದಿದ್ದು ಹೊಳಲ್ಕೆರೆಯಲ್ಲಾದರೂ ಇದರ ಪ್ರಭಾವ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಮೇಲಾಗಬೇಕು ಎಂಬ ರಣತಂತ್ರ ಹೆಣೆಯಲಾಗಿತ್ತು. ಈ ಭಾಗಗಳಿಂದಲೇ ಜನರನ್ನು ಕರೆ ತರಲಾಗಿತ್ತು.

ಸಿದ್ದು ಸರ್ಕಾರಕ್ಕೆ ಚಾಟಿ: ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಕಾಲೇಜು ಮೈದಾನದಲ್ಲಿ ಬುಧವಾರ ಪರಿವರ್ತನಾ ಯಾತ್ರೆ ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ಭಾಷಣದ ಬಹುಪಾಲು ಸಮಯವನ್ನು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಚಾರ್ಜ್​ಶೀಟ್​ಗೆ ಮೀಸಲಿಟ್ಟರು.

ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದು ಪದೇಪದೆ ದೂರುವ ಸಿಎಂ ಮೊದಲು ನಾವು ಕೊಟ್ಟ 3 ಲಕ್ಷ ಕೋಟಿ ರೂ. ಅನುದಾನದ ಲೆಕ್ಕ ಕೊಡಲಿ ಎಂದು ಗುಡುಗಿದರು. ಯುಪಿಎ ಸರ್ಕಾರವಿದ್ದಾಗ 13ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ 88,588 ಕೋಟಿ ರೂ. ಸಿಕ್ಕಿದ್ದರೆ ಬಿಜೆಪಿ ಅವಧಿಯಲ್ಲಿ 14ನೇ ಹಣಕಾಸು ಆಯೋಗದಡಿ 2.19 ಲಕ್ಷ ಕೋಟಿ ರೂ. ಲಭಿಸಿದೆ ಎಂದು ಅಂಕಿಅಂಶ ಸಹಿತ ವಿವರಿಸಿದರು. ಇದಲ್ಲದೆ ಮುದ್ರಾದಡಿ 39 ಸಾವಿರ ಕೋಟಿ ರೂ., ಸ್ವಚ್ಛ ಭಾರತಕ್ಕೆ 206 ಕೋಟಿ ರೂ., ಮೆಟ್ರೋಗೆ 2,600 ಕೋಟಿ ರೂ., ಮನೆಗಳಿಗೆ 219 ಕೋಟಿ ಸೇರಿ 79 ಸಾವಿರ ಕೋಟಿ ರೂ. ನೀಡಲಾಗಿದೆ. ಮೋದಿ ಸರ್ಕಾರ ಕೊಟ್ಟ ಈ ಹಣ ಎಲ್ಲಿ ಹೋಯಿತು ಎಂದು ಕರ್ನಾಟಕದ ಜನ ನಿಮ್ಮನ್ನು ಪ್ರಶ್ನೆ ಕೇಳುತ್ತಿದ್ದಾರೆ. ಅದಕ್ಕೆ ಮೊದಲು ಉತ್ತರ ಕೊಡುವಂತೆ ಸವಾಲು ಹಾಕಿದರು.

ಆ ಹಣ ಎಲ್ಲಿ ಹೋಯಿತು ಗೊತ್ತಾ ಎಂದು ನೆರೆದಿದ್ದ ಜನಸಾಗರಕ್ಕೆ ಪ್ರಶ್ನಿಸಿದ ಷಾ, ಅದು ನಿಮ್ಮೂರಿನ ಕಾಂಗ್ರೆಸ್ ಮುಖಂಡರ ಜೇಬು ಸೇರಿದೆ. ತಗಡಿನ ಮನೆಯಲ್ಲಿದ್ದ ಕಾಂಗ್ರೆಸಿಗರು ಮೂರಂತಸ್ತಿನ ಮನೆ ಕಟ್ಟಿಕೊಂಡಿದ್ದಾರೆ. ಮನೆ ಎದುರು ಮೊಪೆಡ್ ಬದಲು ದುಬಾರಿ ಕಾರು ಬಂದು ನಿಂತಿದೆ. ನೀವು ಕಟ್ಟಿದ ತೆರಿಗೆ ಹಣವನ್ನೂ ಕಾಂಗ್ರೆಸ್​ನವರು ತಿಂದು ತೇಗಿದ್ದಾರೆ ಎಂದು ದೂರಿದರು.

70 ಲಕ್ಷ ರೂ. ಕೈಗಡಿಯಾರ ಉಡುಗೊರೆ ಪಡೆದ ಮುಖ್ಯಮಂತ್ರಿ ಜನರ ಹಣವನ್ನು ಉದ್ಯಮಿಗಳಿಗೆ ಕೊಡುತ್ತಿದ್ದಾರೆ. ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್, ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ, ಅಕ್ರಮ ಗಣಿಗಾರಿಕೆ ಕಾರಣಕ್ಕೆ ಮಂತ್ರಿಯೊಬ್ಬರ ರಾಜೀನಾಮೆ, ಸ್ಟೀಲ್ ಬ್ರಿಡ್ಜ್ ಅನುಮತಿಗಾಗಿ 100 ಕೋಟಿ ರೂ. ಲಂಚ, ಎಂಐಆರ್ ಸ್ಕ್ಯಾನಿಂಗ್​ನ ಕಾಂಟ್ರ್ಯಾಕ್ಟ್ ಸೇರಿ ಭ್ರಷ್ಟಾಚಾರಗಳ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ. ಹೇಳುತ್ತ ಹೋದರೆ ಒಂದು ಸಪ್ತಾಹವನ್ನೇ ಮಾಡಬೇಕಾದೀತು ಎಂದು ಷಾ ಲೇವಡಿ ಮಾಡಿದರು.

ಕೈ ಹಿಂದುಳಿದವರ ವಿರೋಧಿ

ರಾಜ್ಯದಲ್ಲಿ ಒಬಿಸಿ ಪರ ಎನ್ನುವ ಕಾಂಗ್ರೆಸ್, ಹಿಂದುಳಿದವರ ಪರ ಕಾನೂನು ರಚನೆಗೆ ಸಂಸತ್ತಿನಲ್ಲಿ ಅಡ್ಡಗಾಲು ಹಾಕುತ್ತಿದೆ. ದೇಶವಿರೋಧಿ ಸಂಘಟನೆಯ ಮೇಲಿನ ಕೇಸ್ ಹಿಂತೆಗೆದುಕೊಳ್ಳುವ ಸರ್ಕಾರ, ಗಣಪತಿ ಪೆಂಡಾಲ್​ಗೆ 10 ಲಕ್ಷ ರೂ. ಬಾಂಡ್ ಕೇಳುತ್ತದೆ. ವೋಟ್​ಬ್ಯಾಂಕ್​ಗೆ

ತುಷ್ಟಿಕರಣದ ರಾಜಕಾರಣ ಮಾಡುತ್ತಿರುವ ಹಿಂದು ವಿರೋಧಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಅಮಿತ್ ಷಾ ಕರೆ ನೀಡಿದರು.


ದೆಹಲಿಯಲ್ಲೇ ಬಿಜೆಪಿ ಟಿಕೆಟ್ ಅಂತಿಮ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸಂಘಟನೆ ಭದ್ರಪಡಿಸುವತ್ತ ಗಮನ ನೀಡಿದರೆ ಸಾಕು, ಟಿಕೆಟ್ ಅಂತಿಮಗೊಳಿಸುವಿಕೆ ಏನಿದ್ದರೂ ನವದೆಹಲಿಯಲ್ಲೇ ನಡೆಯುತ್ತದೆ ಎಂಬ ಸಂದೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೀಡಿದ್ದಾರೆ.

ಚುನಾವಣೆ ತಯಾರಿಗಾಗಿ ಈಗಾಗಲೆ ಮೂರು ಬಾರಿ ಪ್ರವಾಸ ನಡೆಸಿರುವ ಷಾ, ಒಮ್ಮೆಯೂ ಅಭ್ಯರ್ಥಿಗಳ ಬಗ್ಗೆ ಮಾತನಾಡದೆ ಕೇವಲ ಸಂಘಟನೆಗಷ್ಟೇ ಒತ್ತು ನೀಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ 3 ಹಂತದಲ್ಲಿ ಸಮೀಕ್ಷೆ ನಡೆಯಲಿದೆ. ರಾಜ್ಯ ಘಟಕದಿಂದ ಒಂದು ಸಮೀಕ್ಷೆ ನಡೆದರೆ, ಷಾ ತಂಡದಿಂದ ಎರಡು ಪ್ರತ್ಯೇಕ ಸಮೀಕ್ಷೆ ನಡೆಸಿ ಗೆಲ್ಲುವ ಅಭ್ಯರ್ಥಿಗಳನ್ನು ನಿರ್ಧರಿಸಲಾಗುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ ಎಂಬುದೂ ಗಣನೆಗೆ ಬರುತ್ತದೆ.

ಪ್ರತಿ ಸ್ಪರ್ಧಿ ಅಭ್ಯರ್ಥಿಗಳ ರಾಜಕೀಯ, ವೈಯಕ್ತಿಕ ಹಿನ್ನೆಲೆ, ಯಾವ ಸಮುದಾಯ ಎಂಬೆಲ್ಲ ವಿಚಾರಗಳ ಅಧ್ಯಯನ ನಡೆಸಲಾಗುತ್ತದೆ. ಪದಾಧಿಕಾರಿಗಳಷ್ಟೆ ಅಲ್ಲದೆ, ರಾಜ್ಯ ಪ್ರಮುಖರ ಸಭೆಯಲ್ಲೂ ಅಭ್ಯರ್ಥಿಗಳ ಬಗ್ಗೆ ಷಾ ರ್ಚಚಿಸಿಲ್ಲ. ಯಡಿಯೂರಪ್ಪ, ಅನಂತಕುಮಾರ್, ಬಿ.ಎಲ್. ಸಂತೋಷ್ ಸೇರಿ ಕೆಲವರಿಂದ ಪಡೆದ ಮಾಹಿತಿ ಆಧಾರದಲ್ಲಿ ನವದೆಹಲಿಯಲ್ಲೇ ಟಿಕೆಟ್ ಅಂತಿಮವಾಗುತ್ತದೆ. ರಾಜ್ಯ ಪ್ರವಾಸದಲ್ಲಿ ಯಾವುದೇ ಕಾರಣಕ್ಕೆ ಅಭ್ಯರ್ಥಿ ವಿಚಾರ ಚರ್ಚೆಯಾಗುವುದಿಲ್ಲ ಎಂದು ಬಿಜೆಪಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಸಂಘಟನೆ, ಬೂತ್, ಉಸ್ತುವಾರಿ: ಆಗಸ್ಟ್​ನಲ್ಲಿ ಮೂರು ದಿನ ರಾಜ್ಯ ಪ್ರವಾಸಕ್ಕೆ ಬಂದಿದ್ದ ಅಮಿತ್ ಷಾ, ಅಭ್ಯರ್ಥಿ ಆಯ್ಕೆ ವಿಚಾರ ನಮಗೆ ಬಿಡಿ ಎನ್ನುವುದನ್ನು ಬಿಟ್ಟರೆ ಟಿಕೆಟ್ ಕುರಿತು ಎಲ್ಲಿಯೂ ಮಾತನಾಡಿರಲಿಲ್ಲ. ಮತಗಟ್ಟೆ ಸಮಿತಿ ಬಲವರ್ಧನೆ, ಮತ್ತೊಂದು ಕ್ಷೇತ್ರದ ಉಸ್ತುವಾರಿ, ವಿಸ್ತಾರಕ ಯೋಜನೆಯೇ ಷಾ ಮಾತಿನ ಸಾರಾಂಶವಾಗಿತ್ತು.

ಡಿ.31ಕ್ಕೆ ಆಗಮಿಸಿದಾಗಲಂತೂ ಮತ್ತೊಂದು ಕ್ಷೇತ್ರದ ಉಸ್ತುವಾರಿ ಯೋಜನೆಯನ್ನು ಸರಿಯಾಗಿ ನಿರ್ವಹಿಸದ ರಾಜ್ಯ ಘಟಕವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ಡಿ.9ಕ್ಕೆ ಮೂರನೇ ಬಾರಿ ಪ್ರವಾಸದಲ್ಲಾದರೂ ಅಭ್ಯರ್ಥಿ ಆಯ್ಕೆ ಬಗ್ಗೆ ಅಮಿತ್ ಷಾ ತುಟಿ ಬಿಚ್ಚಬಹುದು ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ. ಬೂತ್ ಸಮಿತಿ ಬಲವರ್ಧನೆ ಜತೆಗೆ ಉಸ್ತುವಾರಿಗಳಿಗೆ 24 ಅಂಶದ ಕಾರ್ಯಸೂಚಿ ನೀಡಿ ತೆರಳಿದ್ದಾರೆ.

Leave a Reply

Your email address will not be published. Required fields are marked *