More

  ಮಧ್ಯಕರ್ನಾಟಕದಲ್ಲಿ ಕನ್ನಡಕ್ಕಿಲ್ಲ ಆಪತ್ತು -ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆ – ನಗರಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

  ದಾವಣಗೆರೆ: ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಪರಭಾಷಿಕರು ಹೆಚ್ಚಿದ್ದಾರೆ. ಆದರೆ, ಮಧ್ಯಕರ್ನಾಟಕದಲ್ಲಿ ಕನ್ನಡ ಭಾಷೆಗೆ ಯಾವುದೇ ಕುತ್ತಿಲ್ಲ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
  ದಾವಣಗೆರೆ ಮಹಾನಗರಪಾಲಿಕೆ ಆವರಣದಲ್ಲಿ ಪಾಲಿಕೆ, ಕನ್ನಡಪರ ಸಂಘ ಸಂಸ್ಥೆಗಳು ಹಾಗೂ ಪತ್ರಕರ್ತರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಬೆಳಗಾವಿಯಲ್ಲಿ ತೆಲುಗು, ಬಳ್ಳಾರಿಯಲ್ಲಿ ಮರಾಠಿಗರು ಹಾಗೂ ರಾಜಧಾನಿ ಬೆಂಗಳೂರಲ್ಲಿ ತಮಿಳು ಭಾಷಿಕರೇ ಹೆಚ್ಚಿದ್ದಾರೆ. ಕರ್ನಾಟಕದ ಎಲ್ಲರಿಗೂ ಮಾತೃಭಾಷೆ ಕಲಿಸುವ ಉದ್ದೇಶದಿಂದಲೇ ಎಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಣೆಗೆ ಬಂದಿದೆ ಎಂದು ಹೇಳಿದರು.
  ದಾವಣಗೆರೆ, ಕನ್ನಡ ಭಾಷೆಗೆ ಮರ್ಯಾದೆ ನೀಡುತ್ತಲೇ ಬಂದಿದೆ. ಅದನ್ನು ಕುಲಭಾಷೆಯಾಗಿಯೂ ಮಾಡಿಕೊಂಡಿದ್ದೇವೆ. ಕನ್ನಡದ ಬೆಳವಣಿಗೆ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಇದು ರಾಜ್ಯದ ಇತರೆಡೆಗಳಲ್ಲೂ ಆಗಬೇಕು ಎಂದು ಆಶಿಸಿದರು. ಇದೇ ವೇಳೆ ಅವರನ್ನು ಪಾಲಿಕೆ ವತಿಯಿಂದ ಬೆಳ್ಳಿಗದೆಯೊಂದಿಗೆ ಸನ್ಮಾನಿಸಲಾಯಿತು.

  ಕನ್ನಡ ಅಧಿಕಾರದಲ್ಲಿರಲಿ
  ವಿಶೇಷ ಉಪನ್ಯಾಸ ನೀಡಿದ ಹರಿಹರ ಎಸ್‌ಜೆವಿಪಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಭಿಕ್ಷಾವರ್ತಿಮಠ, ಕರ್ನಾಟಕದ್ದು ಸಹಿಷ್ಣುತೆಯ ಸಂಸ್ಕೃತಿ. ಸಹಾಯ-ಸಹಕಾರದ ಸಂಸ್ಕೃತಿ. ಆದರೆ, ಕನ್ನಡಿಗರ ಸಹಿಷ್ಣುತೆ ದುರುಪಯೋಗ ಆಗಬಾರದು ಎಂದು ಕಿವಿಮಾತು ಹೇಳಿದರು.
  ಕರ್ನಾಟಕದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬರಲಿ, ಆದರೆ ಕನ್ನಡ ಅಧಿಕಾರದಲ್ಲಿರಬೇಕು. ಕೆಲವು ರಾಜಕಾರಣಿಗಳು ಕನ್ನಡದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ತೋರಿಕೆಗೆ ಭಾಷೆಯ ಕರ್ಯಕ್ರಮ ಆಗಬಾರದು. ನಮ್ಮ ಮಕ್ಕಳಿಗೆ ಕಲಿಸಬೇಕಾದ ಪಠ್ಯದ ಬಗ್ಗೆಯೂ ಚಿಂತನೆ ಆಗಬೇಕು ಎಂದು ಆಶಿಸಿದರು.
  ಇಂಗ್ಲಿಷ್ ಭಾಷೆ ಎಂಬುದು ಸಾಂಸ್ಕೃತಿಕ ಬಾಂಬ್ ಎಂಬುದಾಗಿ ಕೀನ್ಯಾ ದೇಶದ ಚಿಂತಕರೊಬ್ಬರು ಹೇಳಿದ್ದಾರೆ. ಎಲ್ಲರ ಮನೆಗೂ ಈ ಬಾಂಬ್ ಲಗ್ಗೆ ಇಟ್ಟರೆ ಹಮಾಸ್‌ಗಿಂತಲೂ ಹೆಚ್ಚಿನ ನಾಶವಾಗಲಿದೆ. ಭಾಷೆ, ಭೂಮಿ ಮತ್ತು ಜನ ಮೂರರ ನಡುವೆಯೂ ಸಹ ಸಂಬಂಧವಿದೆ. ಭಾಷೆ ನಾಶವಾದರೆ ಸಂಸ್ಕೃತಿಯೂ ಹಾಳಾದಂತೆ. ಭಾಷೆ ನಮ್ಮ ಬದುಕಾಗದ ಹೊರತು ನಾವಾಗಲೀ, ಭಾಷೆಯಾಗಲೀ ಬೆಳವಣಿಗೆಯಾಗದು ಎಂದರು.
  ಕರ್ನಾಟಕದಲ್ಲಿಂದು ಕನ್ನಡ ಮಾತಾಡುವ ಜನ ಶೇ.65ರಷ್ಟಿದ್ದಾರೆ. ಬೆಂಗಳೂರಲ್ಲಿ ಶೇ.44ಕ್ಕೆ ಇಳಿದಿದೆ. ವ್ಯಾಪಾರ, ದಾನಶೂರರು, ಕಲೆಗೆ ಆದ್ಯತೆ ನೀಡಿರುವ ದಾವಣಗೆರೆ ರಾಜಧಾನಿಯಾಗಿದ್ದರೆ ಕನ್ನಡ ಉತ್ತುಂಗ ಸ್ಥಿತಿಯಲ್ಲಿ ಇರುತ್ತಿತ್ತು ಎಂದು ಹೇಳಿದರು.
  ಶಿಕ್ಷಣವೂ ಸಿಗದ, ಇತ್ತ ಹಣವೂ ಹಿಂತಿರುಗದಂತಹ ‘ಹೋಂ ಸ್ಕೂಲಿಂಗ್’ ವ್ಯವಸ್ಥೆ ಕಾಲಿಡುತ್ತಿದೆ. ಹೀಗಾಗಿ ಮಕ್ಕಳು ಇಂಗ್ಲಿಷ್‌ನಲ್ಲೇ ಓದಬೇಕೆಂಬ ಭ್ರಮೆಯನ್ನು ತಾಯಂದಿರು ಕೈಬಿಡಬೇಕು. ಧಾರವಾಡದ ಪೇಡಾದಂತಹ ಸಿಹಿಯಾದ ಭಾಷೆಗೆ ನಾವು ಒತ್ತು ನೀಡದಿದ್ದಲ್ಲಿ ನಮ್ಮತನಕ್ಕೇ ಕುತ್ತು ಬರಲಿದೆ ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 40ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ಮೇಯರ್ ಬಿ.ಎಚ್. ವಿನಾಯಕ, ಉಪಮೇಯರ್ ಯಶೋದಾ ಯಗ್ಗಪ್ಪ, ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ಆಯುಕ್ತೆ ಎನ್. ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಎಚ್.ಉದಯಕುಮಾರ್, ಮೀನಾಕ್ಷಿ ಜಗದೀಶ್, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಪತ್ರಕರ್ತ ಕೆ.ಏಕಾಂತಪ್ಪ, ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶಿವಶಂಕರ್, ಡಿ ದರ್ಜೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಂ. ಹನುಮಂತಪ್ಪ, ಕೆ.ಎಸ್.ಗೋವಿಂದರಾಜು ಇತರರಿದ್ದರು.
  ಭಾರತಿ ಮ್ಯೂಸಿಕಲ್ ನೈಟ್ ತಂಡದಿಂದ ರಸಮಂಜರಿ, ಡಾ.ಶ್ರೀರಾಮ ಕಾಸರ್, ದಿಯಾ ಹೆಗ್ಡೆ, ರೂಬಿನಾ, ಅರ್ಜುನ್ ಇಟಗಿ ತಂಡದಿಂದ ಗೀತಗಾಯನ, ಅಣ್ಣಪ್ಪ ರಾಮದುರ್ಗ ತಂಡದವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts