ಮಧು ಬಂಗಾರಪ್ಪ ಹೇಳುವುದು ಬರೀ ಸುಳ್ಳು

ಸೊರಬ: ಉಪ ಚುನಾವಣೆಯಲ್ಲಿ ಸೋತ ಬಳಿಕ ಮಧು ಬಂಗಾರಪ್ಪ ಹಾಗೂ ಕುಮಾರಸ್ವಾಮಿಯವರ ಸಂಬಂಧ ಹಳಸಿದೆ. ಆದರೆ ಮಧು ಬಂಗಾರಪ್ಪ, ಜಿಲ್ಲೆಯ ಅಭಿವೃದ್ಧಿಗೆ ಹಣ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಆರೋಪಿಸಿದರು.

ತಾಲೂಕಿನ ನೀರಾವರಿ ಯೋಜನೆಗಳಿಗೆ ಸಿಎಂಗೆ ಹೇಳಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಮಧು ಬಂಗಾರಪ್ಪ ಹೇಳುತ್ತಿದ್ದಾರೆ. ಸಚಿವ ಡಿ.ಕೆ ಶಿವಕುಮಾರ್​ಗೆ ಮಾಜಿ ಸಿಎಂ ಯಡಿಯೂರಪ್ಪ ಮಾಡಿದ ಮನವಿ ಮೇರೆಗೆ ಅವರು 15 ದಿನದೊಳಗೆ ಅನುದಾನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ 2018 ಆಗಸ್ಟ್​ನಲ್ಲಿ ಸೊರಬ, ಶಿಕಾರಿಪುರ ಏತ ನೀರಾವರಿ ಯೋಜನೆಗಳಿಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ 75 ವರ್ಷದಲ್ಲಿ 65 ವರ್ಷ ಆಡಳಿತ ನಡೆಸಿದರೂ ರಾಹುಲ್ ಗಾಂಧಿ ಗರೀಬೀ ಹಠಾವೋ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಇಷ್ಟು ವರ್ಷವಾದರೂ ಇವರಿಗೆ ಬಡತನ ದೂರ ಮಾಡಲು ಆಗಿಲ್ಲ ಎಂದರು.

ಕಳೆದ ಐದು ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ 7.5 ಕೋಟಿ ಜನರು ಬಡತನ ರೇಖೆಗಿಂತ ಹೊರಗೆ ಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ಬ್ಯಾಂಕ್ ಸಮಿಕ್ಷೆ ಹೇಳುತ್ತಿದೆ. ಸುಳ್ಳು ಪ್ರಚಾರದಿಂದ ಜನರನ್ನು ಒಲೈಸಲು ಸಾಧ್ಯವಿಲ್ಲ. 2022ರ ವೇಳೆಗೆ 50 ಮಿಲಿಯನ್ ಜನರು ಬಡತನದಿಂದ ಇಳಿಮುಖರಾಗಲಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಬಡತನ ನಿಮೂಲನೆ ಮಾಡಲಾಗುತ್ತದೆ ಎಂದರು.

ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಮಧು ಶಾಸಕರಾಗಿದ್ದಾಗ ಅನುದಾನ ತರಲು ಶ್ರಮಿಸಲಿಲ್ಲ, ಸೋತ ಮೇಲೆ ಅನುದಾನ ತಂದಿದ್ದೇನೆ ಎಂದು ಹೇಳುವುದಾದರೆ ಅವರು ಸೋಲುತ್ತಲೆ ಇರಲಿ. ಆಗಲಾದರೂ ಅನುದಾನ ಬರುತ್ತದೆ. ಇತ್ತ ನಾವು ಗೆದ್ದು ಅಭಿವೃದ್ಧಿ ಕೆಲಸ ಮಾಡುತ್ತಿರುತ್ತೇವೆ ಎಂದರು.

ಶಾಸಕ ಹರತಾಳು ಹಾಲಪ್ಪ, ಎ.ಎಲ್.ಅರವಿಂದ್, ಎಸ್.ದತ್ತಾತ್ರಿ, ಅರ್ಜುನ್, ಶ್ರೀಪಾದ ಹೆಗಡೆ, ಪಾಣಿರಾಜಪ್ಪ, ಗಜಾನನ ರಾವ್, ಗೀತಾ ಮಲ್ಲಿಕಾರ್ಜುನ್, ಮೇಘರಾಜ್, ದೇವಕಿ ಪಾಣಿ, ಮಲ್ಲಿಕಾರ್ಜುನ್ ದ್ವಾರಹಳ್ಳಿ, ನಾಗರಾಜ ಚಿಕ್ಕಸವಿ, ನಯನಾ ಹೆಗಡೆ ಇದ್ದರು.