ಮಧುಮೇಹ ನಿಯಂತ್ರಣಕ್ಕೆ ಯೋಗ

  • ನನಗೆ ಹತ್ತು ವರ್ಷಗಳಿಂದ ಮಧುಮೇಹ. ಗುಳಿಗೆಗಳನ್ನು ಸೇವಿಸುತ್ತಿದ್ದೇನೆ. ಕಳೆದ 2 ತಿಂಗಳಿನಿಂದ ತುಂಬ ಹಸಿವೆಯಾಗುತ್ತಿದೆ. ಪರೀಕ್ಷಿಸಿದಾಗ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದರು. ನಾನು ಮಾನಸಿಕವಾಗಿ ವಿಪರೀತ ಕುಗ್ಗಿಹೋಗಿದ್ದೇನೆ. ಯೋಗದ ಪರಿಹಾರ ತಿಳಿಸಿ.

| ಸುಭದ್ರಮ್ಮ ಹಾವೇರಿ

ಅತಿಯಾದ ಹಸಿವು ಮಧುಮೇಹದ ಮೂರು ಪ್ರಮುಖ ಚಿಹ್ನೆಗಳಲ್ಲಿ ಒಂದು. ಹಸಿವಿನ ಹೆಚ್ಚಳವು ಸಾಮಾನ್ಯವಾಗಿ ತೀವ್ರವಾದ ವ್ಯಾಯಾಮ ಅಥವಾ ಶ್ರಮದಾಯಕ ಚಟುವಟಿಕೆಯಂತಹ ಸಾಮಾನ್ಯ ವಿಷಯ ಪ್ರತಿಕ್ರಿಯೆಯಾಗಿದೆ. ಖಿನ್ನತೆ ಅಥವಾ ಒತ್ತಡದಂತಹ ಸಮಸ್ಯೆಗಳ (ಮಧುಮೇಹ) ಪರಿಣಾಮವಾಗಿ ನಿಮಗೆ ಹೆಚ್ಚು ಹಸಿವೆ ಆಗುತ್ತದೆ. ಪ್ರಥಮವಾಗಿ ನೀವು ಮಧುಮೇಹವನ್ನು ಆದಷ್ಟು ಬೇಗ ನಿಯಂತ್ರಣಕ್ಕೆ ತಂದುಕೊಳ್ಳಬೇಕು. ನಿಯಮಿತ ತಪಾಸಣೆ, ಔಷಧ ಉಪಚಾರ, ಶಿಸ್ತುಬದ್ಧ ಜೀವನಶೈಲಿ, ವ್ಯಾಯಾಮ ಮತ್ತು ಯೋಗದಿಂದ ಮಧುಮೇಹ ಹತೋಟಿ ಸಾಧ್ಯ. ತಾವು ಕೇಳಿದಂತೆ ಮಧುಮೇಹ ನಿಯಂತ್ರಣಕ್ಕೆ ಆಸನಗಳು ಸಹಕಾರಿಯಾಗುತ್ತದೆ. ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಸರಳ ಆಸನಗಳು, ಪ್ರಾಣಾಯಾಮಗಳು, ಧ್ಯಾನ ಮತ್ತು ಮುದ್ರೆಗಳನ್ನು ಅನುಸರಿಸಿ.

ಸೂಚಿತ ಆಸನಗಳು: ಪಾದ ಹಸ್ತಾಸನ, ಅರ್ಧಚಕ್ರಾಸನ, ಬದ್ಧಕೋಣಾಸನ, ಬ್ರಹ್ಮಮುದ್ರೆಯಲ್ಲಿ ಶಶಾಂಕಾಸನ, ಅರ್ಧಮತ್ಸ್ಯೇಂದ್ರಾಸನ, ಊರ್ಧ್ವಪ್ರಸಾರಿತ ಪಾದಾಸನ, ವಿಪರೀತಕರಣಿ, ಶವಾಸನ, ನಾಡಿಶುದ್ಧಿ ಹಾಗೂ ಪ್ರಾಣಮುದ್ರೆ ಹತ್ತು ನಿಮಿಷ, ಚಿನ್ಮುದ್ರೆ ಹತ್ತು ನಿಮಿಷ, ಅಪಾನ ಮುದ್ರೆ ಮೂವತ್ತು ನಿಮಿಷ ಅಭ್ಯಾಸ ಮಾಡಿ. ಯೋಗದ ನಿಯತ ಅಭ್ಯಾಸವು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಧುಮೇಹ ಖಂಡಿತ ನಿಯಂತ್ರಣವಾಗುತ್ತದೆ.

  • ಯೋಗದಲ್ಲಿನ ಮುದ್ರೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ.

| ಭ್ರಮರಾಂಬಿಕೆ (34) ಮೈಸೂರು

ಮುದ್ರೆ ಎಂದರೆ ಗುರುತು. ಯೋಗ, ಮುದ್ರೆಗಳು ಸಾಂಕೇತಿಕ ಸನ್ನೆಗಳಾಗಿದ್ದು, ಇದನ್ನು ಸಾಮಾನ್ಯವಾಗಿ ಕೈ ಮತ್ತು ಬೆರಳುಗಳ ವ್ಯವಸ್ಥಿತ ಚಲನೆಯಲ್ಲಿ ಅಭ್ಯಾಸ ಮಾಡಲಾಗುತ್ತದೆ. ಅವು ಸೂಕ್ಷ್ಮ ದೇಹದಲ್ಲಿ ಶಕ್ತಿಯ ಹರಿವನ್ನು ಸುಗಮಗೊಳಿಸುತ್ತದೆ. ಕೈಗಳ ವಿವಿಧ ಪ್ರದೇಶಗಳು ದೇಹ ಮತ್ತು ಮಿದುಳಿನ ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿದೆ. ಯೋಗದ ಧ್ಯಾನ ಮತ್ತು ಪ್ರಾಣಾಯಾಮಗಳಲ್ಲಿ ಮುದ್ರೆಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಆಸನಗಳಲ್ಲಿ (ಪದ್ಮಾಸನ, ವಜ್ರಾಸನ, ಸುಖಾಸನ ಭಂಗಿಗಳಲ್ಲಿ) ಕುಳಿತಾಗ ಇವನ್ನು ಮಾಡಲಾಗುತ್ತದೆ.

ಹೆಬ್ಬೆರಳು ಬೆಂಕಿಯ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ತೋರು ಬೆರಳುಗಳು ಗಾಳಿಯನ್ನು, ಮಧ್ಯದ ಬೆರಳುಗಳು ಆಕಾಶತತ್ವ, ಉಂಗುರ ಬೆರಳುಗಳು ನೀರಿನ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ಈ ಐದು ಅಂಶಗಳ ಸಮತೋಲನಕ್ಕೆ ಮುದ್ರೆಗಳನ್ನು ಬಳಸಲಾಗುತ್ತದೆ. ಮುದ್ರೆಗಳನ್ನು ವಿಶೇಷವಾಗಿ ಮನಸ್ಸಿನ ಭಾವನೆಗಳನ್ನು ಪ್ರಕಟಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಉಪಯೋಗಿಸಲಾಗುತ್ತದೆ. ಮುದ್ರೆಗಳು ಒಂದು ನಿರ್ದಿಷ್ಟ ಬಿಂದುವಿನ ಮೇಲೆ ಮೃದುವಾದ ಒತ್ತಡವನ್ನು ತಂದು ಪ್ರಾಣ ಶಕ್ತಿ ಮತ್ತು ಶಾರೀರಿಕ ಶಕ್ತಿಯನ್ನು ನಿಯಂತ್ರಿಸುತ್ತದೆ. ಮುದ್ರೆಗಳನ್ನು ಯಾರೂ ಬೇಕಾದರೂ ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು. ಕುಳಿತಾಗ, ನಿಂತಾಗ, ಪ್ರಯಾಣಿಸುವಾಗ, ಹಾಗೆಯೇ ಹಾಸಿಗೆಯಲ್ಲಿ ಮಲಗಿರುವಾಗ, ಟಿ.ವಿ ವೀಕ್ಷಣೆ ಮಾಡುತ್ತಿರುವಾಗಲೂ ಮುದ್ರೆಗಳನ್ನು ಮಾಡಬಹುದು. ಮುದ್ರೆಯನ್ನು ಎರಡೂ ಕೈಗಳಿಂದ ಮಾಡಿದರೆ ಉತ್ತಮ ಲಾಭ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *