ಮಧುಕರ ಶೆಟ್ಟಿ ಬದುಕು ಮಾದರಿಯಾಗಲಿ

ಚಿಕ್ಕಮಗಳೂರು: ಪೊಲೀಸ್ ಇಲಾಖೆ ಹಾಗೂ ಲೋಕಾಯುಕ್ತಕ್ಕೆ ಗೌರವ ಘನತೆ ತಂದು ಕೊಟ್ಟ ಕನ್ನಡದ ಅಧಿಕಾರಿಯೊಬ್ಬನ ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಹೇಳಿದರು.

ರೈತ ಸಂಘ, ಬಿಎಸ್​ಪಿ, ದಲಿತ ಸಂಘರ್ಷ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳು ಶನಿವಾರ ಆಯೋಜಿಸಿದ್ದ ಎಸ್ಪಿ ಮಧುಕರ ಶೆಟ್ಟಿ ಒಂದು ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ‘ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು.

ದಕ್ಷತೆ, ಪ್ರಾಮಾಣಿಕತೆ ಜತೆ ಕೆಲಸದ ಬದ್ಧತೆ ಹೊಂದಿದ್ದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಎಲ್ಲ ವರ್ಗದವರ ಮನ್ನಣೆ ಗಳಿಸಿದ್ದರು. ಸಾಮಾಜಿಕ ಕಾಳಜಿ ಹೊಂದಿದ್ದರು. ಒಬ್ಬ ಅಧಿಕಾರಿ ಹೇಗೆ ಬಡವರ, ಶೋಷಿತರ ಪರವಾಗಿ ನಿಲುವು ತಾಳಬೇಕೆಂಬುದನ್ನು ತೋರಿಸಿಕೊಟ್ಟಿದ್ದರು. ಇಂಥ ವ್ಯಕ್ತಿಗಳ ಜೀವನದ ತತ್ವ, ಸಿದ್ಧಾಂತಗಳು ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು ಎಂದರು.

ಕೆಳ ಹಂತದ ನೌಕರರ ತಪ್ಪುಗಳನ್ನು ವಿಭಿನ್ನವಾಗಿ ತಿದ್ದುವ ಮೂಲಕ ಪರಿವರ್ತನೆ ಮಾಡುತ್ತಿದ್ದರು. ಎಂದಿಗೂ ಕೆಳ ಹಂತದ ಅಧಿಕಾರಿಗಳು, ನೌಕರರನ್ನು ದಂಡಿಸುವ ಕಡೆಗೆ ಹೋಗಲಿಲ್ಲ. ಎಂದಿಗೂ ಅವರ ನಂಬಿದ ಸಾಮಾಜಿಕ ಕಾಳಜಿಯಿಂದ ದೂರ ಸರಿಯಲಿಲ್ಲ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್ ಮಾತನಾಡಿ, ಮಧುಕರ ಶೆಟ್ಟಿ ಸಮಾಜ ಚಿಂತಕರಾಗಿ ಜೀವನ ನಡೆಸಿದ್ದಾರೆ. ಇಂಥವರ ಬದುಕು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.

ಬರಹಗಾರ ಕೆ.ಸಿ.ರೆಡ್ಡಿ, ಬಿಎಸ್​ಎಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ, ರೈತ ಸಂಘದ ಕೆ.ಕೆ.ಕೃಷ್ಣೇಗೌಡ, ಕನ್ನಡಪರ ಹೋರಾಟಗಾರ ತೇಗೂರು ಜಗದೀಶ್, ಮಲ್ಲೆ ಅಣ್ಣಯ್ಯ, ವಸಂತಕುಮಾರ್, ಡಾ. ಸುಂದರ ಗೌಡ, ಬಿ.ಚಂದ್ರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್. ಮೂರ್ತಿ, ಸಿಪಿಐ ರೇಣುಕಾರಾಧ್ಯ ಇದ್ದರು.

ಸರ್ಕಾರಕ್ಕೆ ಪ್ರಾಮಾಣಿಕರು ಬೇಕಿಲ್ಲ: ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕ ಅಧಿಕಾರಿಗಳು ಬೇಡವಾಗಿದ್ದು ದಕ್ಷರಿಗೆ ಈಗಲೂ ವರ್ಗಾವಣೆ ಶಿಕ್ಷೆ ನೀಡಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದಲ್ಲಿ ತರಬೇತಿ ಪಡೆದು ಬಂದ ಎಸ್ಪಿ ಮಧುಕರ ಶೆಟ್ಟಿ ಅವರಿಗೆ ರಾಜ್ಯದಲ್ಲಿ ಉತ್ತಮ ಹೊಣೆ ನೀಡಬೇಕಾದ ರಾಜ್ಯ ಸರ್ಕಾರ ಆಂಧ್ರದಲ್ಲಿರುವ ತರಬೇತಿ ಕೇಂದ್ರಕ್ಕೆ ನಿಯೋಜಿಸಿತ್ತು. ಪೊಲೀಸ್ ಇಲಾಖೆ ಹಾಗೂ ಲೋಕಾಯುಕ್ತ ಸಂಸ್ಥೆಗೆ ಹೆಸರು ತಂದು ಕೊಟ್ಟು ಅವುಗಳ ಘನತೆ ಹೆಚ್ಚಿಸಿದ ಅವರನ್ನು ಸರಿಯಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ವಿಫಲವಾಯಿತು ಎಂದು ವಿಷಾದಿಸಿದರು.

ತಪ್ಪು ಮಾಡಿದ ಜನಪ್ರತಿನಿಧಿಗಳನ್ನು ಜೈಲಿಗೆ ಕಳುಹಿಸಿದ ನಿಷ್ಠುರ ಕಾರ್ಯತತ್ಪರತೆ ಅವರದು. ಜನಪರ ಧೋರಣೆ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಮಧುಕರ ಶೆಟ್ಟಿ ಮಡಿದ ಮೇಲೆ ಎಲ್ಲ ಪಕ್ಷದವರೂ ಮೊಸಳೆ ಕಣ್ಣೀರು ಸುರಿಸುತ್ತಿದ್ದರು. ಇದ್ದಾಗ ಅವರ ಸೇವೆ ಬಳಸಿಕೊಳ್ಳಲು ಇವೆರೆಲ್ಲ ಹಿಂದೇಟು ಹಾಕಿದರು ಎಂದು ಟೀಕಿಸಿದರು.