ಬೆಂಗಳೂರು: ರಾಜ್ಯದಲ್ಲಿ ದಕ್ಷ ಅಧಿಕಾರಿ ಎನಿಸಿದ ಐಪಿಎಸ್ ಡಾ.ಮಧುಕರ್ ಶೆಟ್ಟಿ ಅವರ ಸಾವಿನ ಸತ್ಯಾಂಶ ತಿಳಿಯಲು ತಜ್ಞರ ಸಮಿತಿ ರಚಿಸಿದೆ.ಅನಾರೋಗ್ಯ ಹಿನ್ನೆಲೆಯಲ್ಲಿ 2018ರ ಡಿ.25ರಂದು ಮಧುಕರ್ ಶೆಟ್ಟಿ ಅವರನ್ನು ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.28ರಂದು ಮಧುಕರ್ ಶೆಟ್ಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೆ ಎಚ್1ಎನ್1 ಕಾರಣ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು.ಆದರೆ, ಮಧುಕರ್ ಶೆಟ್ಟಿ ಸಾವಿನ ಬಗ್ಗೆ ಕುಟುಂಬದವರು ಹಾಗೂ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದರು. ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಹಾಗಾಗಿ, ರಾಜ್ಯ ಸರ್ಕಾರ ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ 7 ತಜ್ಞರ ಸಮಿತಿ ರಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕಾರ್ಡಿಯೋಥೋರಾಸಿಕ್ ಸರ್ಜರಿ ವಿಭಾಗದ ಡಾ.ಸೀತಾರಾಮ್ ಭಟ್, ನಿಮ್ಹಾನ್ಸ್ ವೈರಾಲಜಿ ವಿಭಾಗದ ಮುಖ್ಯಸ್ಥ ಡಾ. ವಿ.ರವಿ, ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ವಿಭಾಗದ ಡಾ. ನಾಗರಾಜು ಅವರನ್ನು ಸದಸ್ಯರಾಗಿ ನೇಮಿಸಿದೆ. ತಜ್ಞರ ತಂಡ ಕಾಂಟಿನೆಂಟಲ್ ಆಸ್ಪತ್ರೆಯಿಂದ ಮಧುಕರ್ ಶೆಟ್ಟಿಗೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ವರದಿಯನ್ನು ಸರ್ಕಾರಕ್ಕೆ ನೀಡಲಿದೆ. ಈ ವರದಿ ಆಧರಿಸಿ ಸರ್ಕಾರ ಮಧುಕರ್ ಶೆಟ್ಟಿ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕಾ ಬೇಡವಾ ಎಂಬುದರ ಬಗ್ಗೆ ನಿರ್ಧರ ತೆಗೆದುಕೊಳ್ಳಲಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.