ಮದ್ಯದ ಅಂಗಡಿ ತೆರೆಯದಿರಲು ಆಗ್ರಹ

 ಬೆಳಗಾವಿ: ರಾಮದುರ್ಗ ತಾಲೂಕಿನ ಹಿರೇಕೊಪ್ಪ ಕೆ.ಎಸ್. ಮತ್ತು ಚಿಕ್ಕೊಪ್ಪ ಕೆ.ಎಸ್. ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡದಂತೆ ಆಗ್ರಹಿಸಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಸ್ತ್ರೀ ಶಕ್ತಿ ಸಂಘ ಮತ್ತು ಅಕ್ಕಮಹಾದೇವಿ ಸ್ತ್ರೀ ಶಕ್ತಿ ಸಂಘದ ನೇತೃತ್ವದಲ್ಲಿ ಸ್ಥಳೀಯ ನೂರಾರು ಜನರು ಪ್ರತಿಭಟನೆ ನಡೆಸಿದರು.

ಗ್ರಾಮಗಳಲ್ಲಿನ ಪರಿಸರ ಹಾಳು ಮಾಡುವ ಉದ್ದೇಶದಿಂದ ಕೆಲವರು ಮದ್ಯದ ಅಂಗಡಿಗಳನ್ನು ಆರಂಭಿಸಲು ಮುಂದಾಗಿದ್ದಾರೆ. ರೈತರು, ಕೂಲಿ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳು ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿರುವುದರಿಂದ ಈ ಗ್ರಾಮಗಳಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ಆರಂಭಿಸಲು ಅನುಮತಿ ನೀಡಬಾರದು ಎಂದು ಮನವಿ ಮೂಲಕ ಒತ್ತಾಯಿಸಿದರು.

2016-17ನೇ ಸಾಲಿನಲ್ಲಿ ಎಂಎಸ್‌ಐಎಲ್ ಮದ್ಯದ ಅಂಗಡಿಯನ್ನು ತೆರೆಯಲು ಅನುಮತಿ ಕೊಡಬಾರದು ಎಂದು ಅಬಕಾರಿ ಸಚಿವರಿಗೆ ಮನವಿ ನೀಡಲಾಗಿದೆ. ಜತೆಗೆ ಸ್ಥಳೀಯ ಶಾಸಕರಿಗೆ ನಿರಂತರ ಮನವಿ ಸಲ್ಲಿಸುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಹೊಸದಾಗಿ ಮದ್ಯದ ಅಂಗಡಿಗಳನ್ನು ಆರಂಭಿಸಲು ಸಜ್ಜಾಗಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಿಕೊಡಬಾರದು ಎಂದು ಮನವಿ ಮೂಲಕ ಗ್ರಾಮಸ್ಥರು ವಿನಂತಿಸಿದರು.

ಸ್ಥಳೀಯ ಮಟ್ಟದ ಕಂದಾಯ, ಆರೋಗ್ಯ, ಗ್ರಾಪಂ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗ್ರಾಮಗಳಲ್ಲಿನ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಸಮಸ್ಯೆ ಪರಿಶೀಲಿಸದೆ ಮದ್ಯದ ಅಂಗಡಿ ತೆರೆಯಲು ಪರೋಕ್ಷವಾಗಿ ಅನುಮತಿ ನೀಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಅಧ್ಯಕ್ಷೆ ರುಕ್ಕವ್ವಾ ಚಿಪ್ಪಲಕಟ್ಟಿ, ಶೋಭಾ ಅರ್ಜುನ ತಿಗಡಿ, ದುರಗವ್ವಾ ಚಳ್ಳಿಗೋಳ, ಶಾಂತವ್ವಾ ಮೇಸ್ತ್ರಿ, ಕಸ್ತೂರಿ ಚಿಪ್ಪಲಕಟ್ಟಿ ಇತರರು ಉಪಸ್ಥಿತರಿದ್ದರು.